ಕಾಸರಗೋಡು: ಸಿಪಿಎಂ ಶಕ್ತಿಕೇಂದ್ರಗಳು ಮತೀಯ ಉಗ್ರಗಾಮಿಗಳಿಗೆ ಆಶ್ರಯ ನೀಡುವ ತಾಣಗಳಾಗಿ ಬದಲಾಗುತ್ತಿರುವುದಾಘಿ ಬಿಜೆಪಿ ರಾಜ್ಯ ಸಮಿತಿ ಅಧ್ಯಕ್ಷ ಕೆ. ಸುರೇಂದ್ರನ್ ತಿಳಿಸಿದ್ದಾರೆ. ಅವರು ತಿರುವನಂತಪುರದಲ್ಲಿ ಸಉದ್ದಿಗಾರರ ಜತೆ ಮಾತನಾಡಿದರು.ತೊಡುಪುಳ ನ್ಯುಮಾನ್ ಕಾಲೇಜು ಪ್ರಾಧ್ಯಾಪಕ ಟಿ.ಜೆ ಜೋಸೆಫ್ ಕೈಕಡಿದ ಪ್ರಕರಣದ ಒಂದನೇ ಆರೋಪಿ ಸವಾದ್ ಕಣ್ಣೂರಿನ ಮಟ್ಟನ್ನೂರು ಪ್ರದೇಶದಲ್ಲಿ ಕಳೆದ 13ವರ್ಷಗಳಿಂದ ತಲೆಮರೆಸಿಕೊಂಡು ಓಡಾಡುತ್ತಿದ್ದುದು ಇದಕ್ಕೆ ಸ್ಪಷ್ಟ ನಿದರ್ಶನವಾಗಿದೆ.ಮಟ್ಟನ್ನೂರು ಸಿಪಿಎಂನ ಶಕ್ತಿಕೇಂದ್ರವಾಗಿದ್ದು, ಪ್ರಾಧ್ಯಾಪಕ ಟಿ.ಜೆ ಜೋಸೆಫ್ ಕೈಕಡಿದ ಆರೋಪಿ ಸವಾದ್‍ನನ್ನು ಇದೇ ಸ್ಥಳದಿಂದ ಎನ್‍ಐಎ ಅಧಿಕಾರಿಗಳು ಬಂಧಿಸಿದ್ದರು.
ರಾಜ್ಯವನ್ನೇ ತಲ್ಲಣಗೊಳಿಸಿದ್ದ ಪ್ರಕರಣವೊಂದರ ಆರೋಪಿ, ತಮ್ಮ ಮೂಗಿನ ನೇರ ವಾಸ್ತವ್ಯ ಹೂಡಿದ್ದರೂ, ಈತನನ್ನು ಬಂಧಿಸಲು ಸಾಧ್ಯವಾಗದ ಕೇರಳ ಪೊಲೀಸರ ನಡೆ, ಹಲವಾರು ಸಂಶಯಗಳಿಗೆ ಕಾರಣವಾಗುತ್ತಿದೆ. ಪ್ರಕರಣದ ಇತರ ಆರೋಪಿಗಳನ್ನು ಬಂಧಿಸುವಲ್ಲಿ ಎನ್‍ಐಎ ಯಶಸ್ವಿಯಾಗಿದ್ದರೂ, ಮೂಲಭೂತವಾದಿಗಳ ಸಂರಕ್ಷಣೆಯಿಂದ ಪ್ರಮುಖ ಆರೋಪಿಯನ್ನು ಬಂಧಿಸುವಲ್ಲಿ ಎನ್‍ಐಎ ಅಧಿಕಾರಿಗಳಿಗೆ ಸಾಧ್ಯವಾಗಿಲ್ಲ. ಕಣ್ಣೂರಿನಲ್ಲಿ ಉಗ್ರಗಾಮಿ ಸಂಘಟನೆಯೊಂದಿಗೆ ಸಂಬಂಧ ಹೊಂದಿರುವ ಕೆಲವೊಂದು ಆರೋಪಿಗಳಿಗೆ ಎಲ್ಲಾ ರೀತಿಯ ಸವಲತ್ತು ಲಭ್ಯವಾಗುತ್ತಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಕೆ. ಸುರೇಂದ್ರನ್ ಆಗ್ರಹಿಸಿದ್ದಾರೆ. ಒಂದು ಕಾಲಘಟ್ಟದಲ್ಲಿ ಉಗ್ರಗಾಮಿಗಳು ತಮ್ಮ ಅಡಗುದಾಣವನ್ನಾಗಿ ಕಾಶ್ಮೀರವನ್ನು ಉಪಯೋಗಿಸುತ್ತಿದ್ದರೆ, ಅದೇ ಮಾದರಿಯಲ್ಲಿ ಇಂದು ಕೇರಳವನ್ನು ಬಳಸಿಕೊಳ್ಳುತ್ತಿರುವುದು ಆತಂಕದ ವಿಚಾರ. ಸಿಪಿಎಂ ಮತೀಯ ಮೂಲಭೂತವಾದಿಗಳನ್ನು ಪ್ರೋತ್ಸಾಹಿಸುತ್ತಿರುವುದಾಗಿಯೂ ಸುರೇಂದ್ರನ್ ಆರೋಪಿಸಿದ್ದಾರೆ.