ನವದೆಹಲಿ: ಮುಖ್ಯಮಂತ್ರಿಯ ಶಿಫಾರಸು ಇಲ್ಲದೆ ರಾಜ್ಯಪಾಲರು ಸಚಿವರನ್ನು ಸಂಪುಟದಿಂದ ವಜಾಗೊಳಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಹೇಳಿದೆ.
ನೌಕರಿ ಕೊಡಿಸಲು ಹಣ ಪಡೆದ ಆರೋಪದ ಅಡಿಯಲ್ಲಿ ತಮಿಳುನಾಡು ಸಚಿವ ವಿ. ಸೆಂಥಿಲ್ ಬಾಲಾಜಿ ಅವರನ್ನು ಜಾರಿ ನಿರ್ದೇಶನಾಲಯ (ಇ.ಡಿ) ಬಂಧಿಸಿದ ನಂತರದಲ್ಲಿ ಅವರನ್ನು ಸಚಿವ ಸ್ಥಾನದಲ್ಲಿ ಮುಂದುವರಿಸಬಾರದು ಎಂದು ಕೋರಿದ್ದ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ವಜಾಗೊಳಿಸಿತ್ತು.
ಹೈಕೋರ್ಟ್ ವ್ಯಕ್ತಪಡಿಸಿದ್ದ ಅನಿಸಿಕೆ ತನ್ನ ಅನಿಸಿಕೆಯೂ ಹೌದು ಎಂದು ಹೇಳಿರುವ ನ್ಯಾಯಮೂರ್ತಿಗಳಾದ ಅಭಯ್ ಎಸ್. ಓಕಾ ಮತ್ತು ಉಜ್ಜಲ್ ಭೂಯಾನ್ ಅವರಿದ್ದ ಸುಪ್ರೀಂ ಕೋರ್ಟ್ ಪೀಠವು, ಈ ವಿಚಾರದಲ್ಲಿ ಮಧ್ಯಪ್ರವೇಶ ಮಾಡುವ ಅಗತ್ಯ ಇಲ್ಲ ಎಂದು ಹೇಳಿದೆ.
ಮದ್ರಾಸ್ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಎಂ.ಎಲ್. ರವಿ ಎನ್ನುವವರು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.
ಬಾಲಾಜಿ ಅವರನ್ನು ಸಂಪುಟದಿಂದ ವಜಾಗೊಳಿಸಿ ತಮಿಳುನಾಡು ರಾಜ್ಯಪಾಲ ಆರ್.ಎನ್. ರವಿ ಅವರು ಆದೇಶ ಹೊರಡಿಸಿದ್ದರು. ನಂತರ ಇನ್ನೊಂದು ಆದೇಶ ಹೊರಡಿಸಿದ ರಾಜ್ಯಪಾಲ ರವಿ ಅವರು, ಬಾಲಾಜಿ ಅವರನ್ನು ವಜಾಗೊಳಿಸುವ ಮೊದಲ ಆದೇಶವನ್ನು ಅಮಾನತಿನಲ್ಲಿ ಇರಿಸಿದ್ದರು. ವಜಾ ಆದೇಶವನ್ನು ಅಮಾನತಿನಲ್ಲಿ ಇರಿಸಿದ ಆದೇಶವನ್ನು ರದ್ದುಗೊಳಿಸಬೇಕು ಎಂದು ಕೋರಿ ಮದ್ರಾಸ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು.
ರಾಜ್ಯಪಾಲ ರವಿ ಹಾಗೂ ತಮಿಳುನಾಡಿನ ಡಿಎಂಕೆ ಸರ್ಕಾರದ ನಡುವೆ ಸಂಘರ್ಷ ಕೆಲವು ತಿಂಗಳುಗಳಿಂದ ನಡೆಯುತ್ತಿದೆ. ರಾಜ್ಯಪಾಲರು ಸಚಿವ ಬಾಲಾಜಿ ಅವರನ್ನು ಸಂಪುಟದಿಂದ ವಜಾಗೊಳಿಸುವ ಆದೇಶವನ್ನು 2023ರ ಜೂನ್‌ನಲ್ಲಿ ಹೊರಡಿಸಿದ್ದರು. ಆದರೆ ಇದಕ್ಕೆ ಟೀಕೆಗಳು ವ್ಯಕ್ತವಾದ ನಂತರದಲ್ಲಿ ಅವರು, ಮೊದಲ ಆದೇಶವನ್ನು ಅಮಾನತಿನಲ್ಲಿ ಇರಿಸಲು ಬಯಸುವುದಾಗಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರಿಗೆ ತಿಳಿಸಿದ್ದರು.
ಇಂತಹ ಪ್ರಕರಣಗಳಲ್ಲಿ ರಾಜ್ಯಪಾಲರಿಗೆ ಇರುವ ವಿವೇಚನಾ ಅಧಿಕಾರದ ಬಗ್ಗೆ ಉಲ್ಲೇಖಿಸಿದ್ದ ಹೈಕೋರ್ಟ್, 'ಸಚಿವ ಸ್ಥಾನವನ್ನು ಹಿಂಪಡೆಯುವ ತೀರ್ಮಾನ ಕೈಗೊಳ್ಳುವಾಗ ರಾಜ್ಯಪಾಲರು ಮುಖ್ಯಮಂತ್ರಿಗೆ ತಿಳಿಸಿಯೇ ಆ ತೀರ್ಮಾನ ಕೈಗೊಳ್ಳಬೇಕು. ಏಕಪಕ್ಷೀಯವಾಗಿ ಇಂತಹ ತೀರ್ಮಾನ ತೆಗೆದುಕೊಳ್ಳುವಂತೆ ಇಲ್ಲ. ಈ ಪ್ರಕರಣದಲ್ಲಿ ಮುಖ್ಯಮಂತ್ರಿ ಅವರು ಒಪ್ಪಿಗೆ ನೀಡಿಲ್ಲ' ಎಂದು ಹೇಳಿತ್ತು.
ಬಾಲಾಜಿ ಅವರನ್ನು ಇ.ಡಿ. ಅಧಿಕಾರಿಗಳು ಜೂನ್ 14ರಂದು ಬಂಧಿಸಿದ್ದರು. ಬಂಧನ ನಂತರ ಬಾಲಾಜಿ ಅವರಲ್ಲಿದ್ದ ಖಾತೆಗಳನ್ನು ಹಿಂಪಡೆಯಲಾಗಿದೆ.