ತಿರುವನಂತಪುರ: ಮಹಿಳಾ ಕಾಂಗ್ರೆಸ್ ಆಯೋಜಿಸಿದ್ದ ಪ್ರತಿಭಟನಾ ಮೆರವಣಿಗೆಯನ್ನು ಚದುರಿಸಲು ಪೊಲೀಸರು ಹಾರಿಸಿದ್ದ ಜಲಫಿರಂಗಿಯಿಂದಾಗಿ ಗಾಯಗೊಂಡು ಕಾಂಗ್ರೆಸ್‌ನ ರಾಜ್ಯಸಭಾ ಸಂಸದೆ ಜೆಬಿ ಮಾಥರ್ ಅವರು ಸೋಮವಾರ ಆಸ್ಪತ್ರೆಗೆ ದಾಖಲಾಗಿದ್ದಾರೆ.
ರಾಜ್ಯದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರುದ್ಧ ಮಹಿಳಾ ಕಾಂಗ್ರೆಸ್ ಇಲ್ಲಿ ಆಯೋಜಿಸಿದ್ದ ಪ್ರತಿಭಟನಾ ಮೆರವಣಿಗೆಯಲ್ಲಿ ಘಟನೆ ನಡೆದಿದೆ.
ಖಾಲಿ ಪಾತ್ರೆ ಹಿಡಿದುಕೊಂಡ ಮಹಿಳಾ ಕಾರ್ಯಕರ್ತರು ವಿಧಾನಸೌಧದೆಡೆಗೆ ನಡೆದುಕೊಂಡು ಬರುತ್ತಿದ್ದರು.
ಮಹಿಳಾ ಕಾಂಗ್ರೆಸ್‌ನ ರಾಜ್ಯ ಘಟಕದ ಅಧ್ಯಕ್ಷರೂ ಆಗಿರುವ ಜೆಬಿ ಮಾಥರ್ ಅವರು, ಪ್ರತಿಭಟನಾ ಮೆರವಣಿಗೆಯನ್ನು ಮುನ್ನಡೆಸುತ್ತಿದ್ದರು.
ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು, ವಿಧಾನಸೌಧಕ್ಕೆ ಇರುವ ರಸ್ತೆಯಲ್ಲಿ ಹಾಕಲಾಗಿದ್ದ ಬ್ಯಾರಿಕೇಡ್ ಅನ್ನು ಭೇದಿಸಿ ಮುನ್ನುಗ್ಗಲು ಯತ್ನಿಸಿದರು. ಕೆಲ ಪ್ರತಿಭಟನಾಕರರು ಪಾತ್ರೆಗಳನ್ನು ಎಸೆಯಲು ಪ್ರಯತ್ನಿಸಿದ್ದರಿಂದ, ಪೊಲೀಸರು ಗುಂಪನ್ನು ಚದುರಿಸಲು ಜಲ ಫಿರಂಗಿ ಪ್ರಯೋಗಿಸಿದರು.
ಜಲ ಫಿರಂಗಿ ಪ್ರಯೋಗ ನಿಲ್ಲಿಸಿದ ಕೂಡಲೇ ಪ್ರತಿಭಟನೆ ಮುಂದುವರಿಯಿತು. ಮತ್ತೆ ಪೊಲೀಸರು ಜಲ ಫಿರಂಗಿ ಪ್ರಯೋಗಿಸಿದರು. ಈ ವೇಳೆ ಮಾಥರ್ ಅವರು ಪ್ರಜ್ಞೆ ಕಳೆದುಕೊಂಡು ಕುಸಿದು ಬಿದ್ದರು. ಶೀಘ್ರವೇ ಅವರನ್ನು ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಲಾಯಿತು.
ಎರಡು ಗಂಟೆಗಳ ಬಳಿಕ ಅವರಿಗೆ ಪ್ರಜ್ಞೆ ಮರಳಿ ಬಂತು ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.