ಲಕ್ಷದ್ವೀಪ: ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ಲಕ್ಷದ್ವೀಪಕ್ಕೆ ಭೇಟಿ ನೀಡಿದ ನಂತರ ಭಾರತ-ಮಾಲ್ಡೀವ್ಸ್ ಮಧ್ಯೆ ಎದ್ದಿರುವ ವಿವಾದ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಲಕ್ಷದ್ವೀಪ ಲೋಕಸಭಾ ಸಂಸದ ಮೊಹಮ್ಮದ್ ಫೈಜಲ್, ಭಾರತದ ಆಂತರಿಕ ವಿಷಯಗಳ ಬಗ್ಗೆ ಪ್ರತಿಕ್ರಿಯಿಸುವ ಮೊದಲು ಎರಡು ಬಾರಿ ಯೋಚಿಸಿ ಮಾತನಾಡಿ ಎಂದು ಹೇಳಿದ್ದಾರೆ.
ನಮ್ಮ ಪ್ರಧಾನಮಂತ್ರಿಯವರ ಹೇಳಿಕೆಗಳು ಲಕ್ಷದ್ವೀಪ ಪ್ರವಾಸೋದ್ಯಮಕ್ಕೆ ಸಂಬಂಧಿಸಿವೆ, ಇದು ಸಂಪೂರ್ಣವಾಗಿ ಭಾರತದ ಆಂತರಿಕ ವಿಷಯವಾಗಿದೆ. ಈ ವಿಷಯದ ಬಗ್ಗೆ ಮಾಲ್ಡೀವ್ಸ್ ಉಪ ಮಂತ್ರಿಗಳು ನೀಡಿರುವ ಹೇಳಿಕೆ ಅನಗತ್ಯ ಮತ್ತು ಸ್ವೀಕಾರಾರ್ಹವಲ್ಲ ಎಂದು ಫೈಝಲ್ ಪಿಟಿಐ ಸುದ್ದಿಸಂಸ್ಥೆ ಪ್ರತಿನಿಧಿಗೆ ಪ್ರತಿಕ್ರಿಯಿಸಿದ್ದಾರೆ.
ಮೋದಿ ವಿರುದ್ಧ ಅವಹೇಳನಕಾರಿ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಕ್ಕಾಗಿ ಮಾಲ್ಡೀವ್ಸ್ ಸರ್ಕಾರ ಮೊನ್ನೆ ಭಾನುವಾರ ಮೂವರು ಉಪ ಮಂತ್ರಿಗಳನ್ನು ಅಮಾನತುಗೊಳಿಸಿದೆ.
ಲಕ್ಷದ್ವೀಪವು ಕೇಂದ್ರ ಗೃಹ ಸಚಿವಾಲಯದ ನಿಯಂತ್ರಣದಲ್ಲಿದೆ. ಅದು ಸಹಜವಾಗಿ ಪ್ರಧಾನ ಮಂತ್ರಿಯವರ ಅಡಿಯಲ್ಲಿ ಕೇಂದ್ರಾಡಳಿತ ಪ್ರದೇಶವಾಗಿದೆ. ಪ್ರಧಾನ ಮಂತ್ರಿಗಳು ತಮ್ಮದೇ ಆದ ಪ್ರದೇಶದ ಬಗ್ಗೆ ಮಾತನಾಡುವಾಗ ಮತ್ತು ಅಲ್ಲಿನ ಪ್ರವಾಸೋದ್ಯಮದ ಅಭಿವೃದ್ಧಿಯ ಬಗ್ಗೆ ಚರ್ಚಿಸಿದಾಗ, ಮಾಲ್ಡೀವ್ಸ್ ಅಧಿಕಾರಿಗಳು ಅದರ ಬಗ್ಗೆ ಹೇಳಿಕೆಗಳನ್ನು ನೀಡುವುದರಲ್ಲಿ ಯಾವುದೇ ಅರ್ಥವಿಲ್ಲ. ಇದು ಅನಪೇಕ್ಷಿತವಾಗಿದೆ ಎಂದು ಫೈಝಲ್ ಹೇಳಿದ್ದಾರೆ.
ಮಾಲ್ಡೀವ್ಸ್ ಮಾಧ್ಯಮ ವರದಿಗಳ ಪ್ರಕಾರ, ಈ ವಿವಾದ ನಂತರ ಅಲ್ಲಿನ ಯುವ ಸಚಿವಾಲಯದ ಉಪ ಮಂತ್ರಿಗಳಾದ ಮಲ್ಶಾ ಶರೀಫ್, ಮರಿಯಮ್ ಶಿಯುನಾ ಮತ್ತು ಅಬ್ದುಲ್ಲಾ ಮಹಜೂಮ್ ಮಜಿದ್ ಅವರನ್ನು ಅಮಾನತುಗೊಳಿಸಲಾಗಿದೆ.