ಕಾಸರಗೋಡು: ಜಿಲ್ಲೆಯ ಬಂದಡ್ಕ ಶ್ರೀ ರಾಮನಾಥ ದೇವಳ ಪುರಾತನ ಶ್ರೀರಾಮದೇವಾಲಯಗಳಲ್ಲಿ ಒಂದಗಿದೆ. ಕಾಸರಗೋಡು ನಗರದಿಂದ ಸುಮಾರು 40ಕಿ.ಮೀ ದೂರದಲ್ಲಿರುವ ಬಂದಡ್ಕ ಪೇಟೆಗೆ ಹೊಂದಿಕೊಂಡಿರುವ ಪ್ರದೇಶದಲ್ಲಿ ದೇವಸ್ಥಾನವಿದೆ. ರಾಮರಾಜ ಕ್ಷತ್ರಿಯ ಸಮುದಾಯದ ಆರಾಧ್ಯದೇವರಾಗಿ ಶ್ರೀರಾಮನಾಥನಿಗೆ ಇಲ್ಲಿ ಪೂಜೆ ಸಲ್ಲುತ್ತಿದ್ದು, ಜಿಲ್ಲೆಯ ಪ್ರಮುಖ ಶ್ರೀರಾಮದೇವಾಲಯವಾಗಿ ಖ್ಯಾತಿ ಪಡೆದಿದೆ. ಕೊಟೆಕೊತ್ತಲಗಳನ್ನು ಕಟ್ಟಿ ಆಳ್ವಿಕೆ ನಡೆಸುತ್ತಿದ್ದ ರಾಜರುಗಳೂ ಶ್ರೀರಾಮನಾಥನನ್ನು ಪೂಜಿಸಿಕೊಂಡು ಬರುತ್ತಿದ್ದರು. ಶ್ರೀರಾಮನಾಥ ದೇವಳದಲ್ಲಿ ಶ್ರೀರಾಮನಾಥ ಪ್ರಮುಖ ಆರಾಧ್ಯ ದೇವರಾಗಿದ್ದರೆ, ಅಮ್ಮನವರು, ಕಾಳಭೈರವ, ಗರುಡ, ಹನುಮಂತ ಉಪದೇವರಾಗಿ ಪೂಜೆಗೊಳ್ಳುತ್ತಿದ್ದಾರೆ. 1990ರಲ್ಲಿ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ನೆರವೇರಿದೆ.
ಕೋಟೆಕಣಿ ಶ್ರೀರಾಮನಾಥ ದೇವಾಲಯ:
ಕಾಸರಗೋಡು ನಗರದ ಅನತಿದೂರದಲ್ಲಿರುವ ಕೋಟೆಕಣಿ ಶ್ರೀರಾಮನಾಥ ದೇವಾಲಯಕ್ಕೆ ಒಂದುವರೆ ಶತಮಾನದ ಇತಿಹಾಸವಿದೆ. ರಾಮಕ್ಷತ್ರಿಯ ಸಮಾಜದ ಹಿರಿಯ ತಲೆಮಾರು ಹೊನ್ನಮೂಲೆ ನಾಗರಕಟ್ಟೆಯಲ್ಗಲಿ ಪೂಜಿಸುತ್ತಿದ್ದ ದೇವರನ್ನು ಸುಮಾರು 60ವರ್ಷಗಳ ಹಿಂದೆ ಕೋಟೆಕಣಿಗೆ ತಂದು ಪೂಜಿಸಿಕೊಂಡು ಬರಲಾಗುತ್ತಿದೆ. ದೇವಾಲಯದ ಆಸುಪಾಸು ನಾಗನಕಟ್ಟೆ, ಗುಳಿಗನ ಕಟ್ಟೆ, ಬ್ರಹ್ಮರಾಕ್ಷಸ, ರಕ್ತೇಶ್ವರಿ, ಮಂತ್ರಮೂರ್ತಿ ಸಾನ್ನಿಧ್ಯವಿದೆ. ರಾಮನವಮಿ, ನವರಾತ್ರಿಗೆ ವಿಶೇಷ ಕಾರ್ಯಕ್ರಮ ಇಲ್ಲಿ ನಡೆಯುತ್ತಿದೆ. ಧಾರ್ಮಿಕ ಚಟುವಟಿಕೆಗಳೊಂದಿಗೆ, ಕನ್ನಡ ಸಂಸ್ಕøತಿಯ ಪೋಷಣೆಗೆ ಶ್ರೀರಾಮದೇಗುಲ ಮಹತ್ವದ ಕೊಡುಗೆ ನೀಡುತ್ತಿದೆ. ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ಕೆಲಸ ಶೀಘ್ರ ನೆರವೇರುವಂತೆ 2019ರಲ್ಲಿ ದೇವಾಲಯ ವತಿಯಿಂದ ಶ್ರೀರಾಮತಾರಕ ಯಜ್ಞ, ಸಂಪೂರ್ಣ ರಾಮಾಯಣ ಯಕ್ಷಗಾನ ಬಯಲಾಟ ವಿಶೇಷ ಪೂಜೆಯನ್ನೂ ಆಯೋಜಿಸಲಾಗಿತ್ತು.
ಕಾಸರಗೋಡು ಜಿಲ್ಲೆಯಲ್ಲಿ ಅಡ್ಕಸ್ಥಳ ಶ್ರೀರಾಮ ಭಜನಾಮಂದಿರ, ಕಾಸರಗೋಡು ರೈಲ್ವೆ ನಿಲ್ದಾಣ ಸನಿಹದ ಶ್ರೀರಾಮ ಮಂದಿರದಲ್ಲೂ ಶ್ರಿರಾಮ ದೇವರ ಆರಾಧನೆ ನಡೆಯುತ್ತಿದೆ.
ಚಿತ್ರ: ಕಾಸರಗೋಡು ಕೋಟೆಕಣಿ ಶ್ರೀರಾಮನಾಥ ದೇವಾಲಯ.