ಕೋಲ್ಕತ್ತ: 'ನಾನು ಬದುಕಿರುವವರೆಗೂ ಪಶ್ಚಿಮ ಬಂಗಾಳದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯನ್ನು (ಸಿಎಎ) ಜಾರಿಗೊಳಿಸಲು ಅವಕಾಶ ನೀಡುವುದಿಲ್ಲ' ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದರು.
'ಮುಂದಿನ ಏಳು ದಿನಗಳಲ್ಲಿ ದೇಶದಾದ್ಯಂತ ಸಿಎಎ ಜಾರಿ ಮಾಡಲಾಗುತ್ತದೆ' ಎಂದು ಕೇಂದ್ರ ಸಚಿವ ಶಾಂತನು ಠಾಕೂರ್ ಹೇಳಿಕೆ ನೀಡಿದ ಬೆನ್ನಲ್ಲೇ ಮಮತಾ ಈ ಹೇಳಿಕೆ ನೀಡಿದ್ದಾರೆ.
ಉತ್ತರ ದಿನಾಜಪುರ ಜಿಲ್ಲೆಯ ರಾಯಗಂಜ್‌ನಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಮಮತಾ ಬ್ಯಾನರ್ಜಿ, 'ಲೋಕಸಭಾ ಚುನಾವಣೆಯಲ್ಲಿ ಮತ ಗಳಿಸುವ ಉದ್ದೇಶದಿಂದ ಸಿಎಎ ವಿಚಾರವನ್ನು ಬಿಜೆಪಿ ನಾಯಕರು ಮತ್ತೆ ಪ್ರಸ್ತಾಪಿಸಿದ್ದಾರೆ' ಎಂದು ಆರೋಪಿಸಿದರು.
'ಚುನಾವಣೆ ಸಮೀಪಿಸಿದರೆ ಸಾಕು ಸಿಎಎ ವಿಚಾರವನ್ನು ಎತ್ತಿ ರಾಜಕೀಯ ಲಾಭ ಗಳಿಸಿಕೊಳ್ಳಲು ಬಿಜೆಪಿ ಹಾತೊರೆಯುತ್ತದೆ. ಎಲ್ಲಿಯವರೆಗೂ ನಾನು ಜೀವಂತವಾಗಿರುತ್ತೇನೋ ಅಲ್ಲಿಯವರೆಗೆ ರಾಜ್ಯದಲ್ಲಿ ಸಿಎಎ ಜಾರಿ ಮಾಡಲು ಬಿಡುವುದಿಲ್ಲ' ಎಂದರು.
ಮಮತಾ ಪಾದಯಾತ್ರೆ
ಮುಂಬರುವ ಲೋಕಸಭಾ ಚುನಾವಣೆಗೂ ಮುನ್ನ ಪಕ್ಷವನ್ನು ಸಂಘಟಿಸುವ ನಿಟ್ಟಿನಲ್ಲಿ ಮಮತಾ ಅವರು ರಾಜ್ಯದ ಉತ್ತರ ಭಾಗದಲ್ಲಿ ಮಂಗಳವಾರ ಪಾದಯಾತ್ರೆ ನಡೆಸಿದರು.
ಉತ್ತರ ದಿನಾಜಪುರ ಜಿಲ್ಲೆಯ ಚೋಪ್ಡಾ ಪಟ್ಟಣದಲ್ಲಿ 'ಜನಸಂಯೋಗ ಯಾತ್ರೆ' ಕೈಗೊಂಡ ಅವರು ಆ ಬಳಿಕ ಸಮೀಪದ ಇಸ್ಲಾಂಪುರದಲ್ಲಿ ಮತ್ತೊಂದು ಪಾದಯಾತ್ರೆ ನಡೆಸಿದರು.
ಚೋಪ್ಡಾ ಪಟ್ಟಣದಲ್ಲಿ ಪಾದಯಾತ್ರೆಯ ವೇಳೆ ಮಹಿಳೆಯರು ಮತ್ತು ಮಕ್ಕಳು ಒಳಗೊಂಡಂತೆ ನೂರಾರು ಬೆಂಬಲಿಗರು 'ದೀದಿ.. ದೀದಿ...' ಎಂದು ಘೋಷಣೆ ಕೂಗಿ ಮಮತಾ ಅವರನ್ನು ಸ್ವಾಗತಿಸಿದರು. ಟಿಎಂಸಿಯ ಸ್ಥಳೀಯ ಮುಖಂಡರು ಪಾಲ್ಗೊಂಡಿದ್ದರು.
ಕಳೆದ ಲೋಕಸಭಾ ಚುನಾವಣೆಯಲ್ಲಿ ಬಂಗಾಳದ ಉತ್ತರ ಭಾಗದ ಎಂಟು ಲೋಕಸಭಾ ಕ್ಷೇತ್ರಗಳಲ್ಲಿ ಏಳನ್ನು ಬಿಜೆಪಿ ಗೆದ್ದುಕೊಂಡಿತ್ತು. ಆ ಕ್ಷೇತ್ರಗಳನ್ನು ಮರಳಿ ಪಡೆಯುವ ನಿಟ್ಟಿನಲ್ಲಿ ಟಿಎಂಸಿ ರಣತಂತ್ರ ರೂಪಿಸುತ್ತಿದೆ.