ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಹಾಗೂ ಭಾರತದ ಕುರಿತು ಅವಮಾನಕರ ಹೇಳಿಕೆ ನೀಡಿದ ಮಾಲ್ದೀವ್ಸ್ ಸಚಿವರ ನಡೆಗೆ ಭಾರಿ ವಿರೋಧ ವ್ಯಕ್ತವಾಗಿದೆ. ಹಲವು ಭಾರತೀಯರು ಮಾಲ್ದೀವ್ಸ್ ಪ್ರವಾಸ ಕೈಗೊಳ್ಳದಿರಲು ನಿರ್ಧರಿಸಿದರೆ, ಟ್ರಾವೆಲ್ ಕಂಪನಿ 'EasyMyTrip' ಮಾಲ್ದೀವ್ಸ್ ಪ್ರವಾಸಕ್ಕಾಗಿ ಕಾಯ್ದಿರಿಸಿದ ಎಲ್ಲ ವಿಮಾನ ಟಿಕೆಟ್‌ಗಳನ್ನು ರದ್ದುಗೊಳಿಸಿದೆ.
ಈ ಬಗ್ಗೆ ಎಕ್ಸ್ ವೇದಿಕೆಯಲ್ಲಿ ಮಾಹಿತಿ ಹಂಚಿಕೊಂಡಿರುವ 'EasyMyTrip' ಕಂಪನಿಯ ಸಿಇಒ ನಿಶಾಂತ್ ಪಿಟ್ಟಿ, 'ದೇಶದೊಂದಿಗೆ ಒಗ್ಗಟ್ಟಿನಿಂದ ನಿಂತಿದ್ದು, ಮಾಲ್ದೀವ್ಸ್ ಪ್ರವಾಸಕ್ಕಾಗಿ ಕಾಯ್ದಿರಿಸಿದ ಎಲ್ಲ ವಿಮಾನ ಟಿಕೆಟ್‌ಗಳನ್ನು ರದ್ದುಗೊಳಿಸಲಾಗಿದೆ' ಎಂದು ತಿಳಿಸಿದ್ದಾರೆ.
'ನಮ್ಮ ಕಂಪನಿಯು ಸಂಪೂರ್ಣವಾಗಿ ಸ್ವದೇಶಿಯಾಗಿದ್ದು, ಪ್ರಧಾನಿ ಮೋದಿ ಮತ್ತು ಭಾರತ ಕುರಿತು ಮಾಲ್ದೀವ್ಸ್ ಸಚಿವರ ಹೇಳಿಕೆಯನ್ನು ನಾವು ಖಂಡಿಸುತ್ತೇವೆ. ಅಯೋಧ್ಯೆ ಮತ್ತು ಲಕ್ಷದ್ವೀಪಗಳು ಅಂತರರಾಷ್ಟ್ರೀಯ ಪ್ರವಾಸಿ ತಾಣಗಳಾಗಿ ಹೊರಹೊಮ್ಮಬೇಕೆಂದು ನಾವು ಬಯಸುತ್ತೇವೆ' ಎಂದು ಹೇಳಿದ್ದಾರೆ.
ಅವಮಾನಕರ ಮಾತುಗಳನ್ನು ಆಡಿದ್ದ ಉಪಸಚಿವರಾದ (ಡೆಪ್ಯುಟಿ ಮಿನಿಸ್ಟರ್) ಮರಿಯಂ ಶಿವ್ನ, ಅಬ್ದುಲ್ಲಾ ಎಂ. ಮಾಜಿದ್, ಮಾಲ್ಶಾ ಶರೀಫ್ ಅವರನ್ನು ಮಾಲ್ದೀವ್ಸ್ ಸರ್ಕಾರ ಭಾನುವಾರ ಅಮಾನತು ಮಾಡಿದೆ.