ಲಖನೌ: ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿರುವಂತೆಯೇ ರಾಜಕೀಯ ನಿವೃತ್ತಿ ಮತ್ತು ಕಾಂಗ್ರೆಸ್ ನೇತೃತ್ವದ INDI ಕೂಟದೊಂದಿಗೆ ಮೈತ್ರಿ ಕುರಿತು BSP ಮುಖ್ಯಸ್ಥೆ ಮಾಯಾವತಿ ಮಹತ್ವದ ಹೇಳಿಕೆ ನೀಡಿದ್ದಾರೆ.
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ತಮ್ಮ ಪಕ್ಷ ಏಕಾಂಗಿಯಾಗಿ ಕಣಕ್ಕಿಳಿಯಲಿದೆ ಎಂದು ಬಿಎಸ್‌ಪಿ ವರಿಷ್ಠೆ ಮಾಯಾವತಿ ಸೋಮವಾರ ಹೇಳಿದ್ದು, ಚುನಾವಣೋತ್ತರ ಮೈತ್ರಿಯನ್ನು ಅವರು ತಳ್ಳಿಹಾಕಲಿಲ್ಲ. ತಮ್ಮ ಜನ್ಮದಿನದಂದು ರಾಜ್ಯ ಪಕ್ಷದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯದಿಂದ ನಿವೃತ್ತಿ ಹೊಂದುವ ಕುರಿತು ಮಾಧ್ಯಮದ ಒಂದು ವಿಭಾಗದ ವರದಿಗಳನ್ನು ಸ್ಪಷ್ಟವಾಗಿ ನಿರಾಕರಿಸಿದರು.
ಏಪ್ರಿಲ್-ಮೇ ತಿಂಗಳಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಗೆ ಪಕ್ಷವು ಯಾವುದೇ ಮೈತ್ರಿ ಮಾಡಿಕೊಳ್ಳುವುದಿಲ್ಲ ಮತ್ತು ಏಕಾಂಗಿಯಾಗಿ ಹೋಗಲಿದೆ. ಚುನಾವಣೆಯ ನಂತರದ ಪರಿಸ್ಥಿತಿಯನ್ನು ಅವಲೋಕಿಸಿದ ನಂತರ ಪಕ್ಷವು ಯಾವುದೇ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದನ್ನು ಪರಿಗಣಿಸುತ್ತದೆ ಎಂದು ಹೇಳಿದರು.
ಮಾಯಾವತಿ ಅವರು ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಅವರನ್ನು ಗುರಿಯಾಗಿಸಿಕೊಂಡು ಮಾತನಾಡಿ ಗೋಸುಂಬೆ ಎಂದು ಕರೆದಿದ್ದಾರೆ. ತನ್ನ ಚಾಣಾಕ್ಷ ರಾಜಕೀಯ ತಂತ್ರಗಳಿಗೆ ಹೆಸರುವಾಸಿಯಾಗಿರುವ ಮಾಯಾವತಿ, ಲೋಕಸಭಾ ಚುನಾವಣೆಯ ಸ್ವತಂತ್ರ ನಿಲುವನ್ನು ತಿಳಿಸಲು ತಮ್ಮ ಜನ್ಮದಿನವನ್ನೇ ಆಯ್ಕೆಮಾಡಿಕೊಂಡಿದ್ದಾರೆ. ಮೈತ್ರಿ ಮಾಡಿಕೊಳ್ಳದೆ ಚುನಾವಣೆಯಲ್ಲಿ ಸ್ಪರ್ಧಿಸುವ ನಿರ್ಧಾರವು ದಿಟ್ಟ ಹೆಜ್ಜೆ ಎಂದೇ ಹೇಳಬಹುದು, ಇದು ವಿಶಿಷ್ಟವಾದ ಚುನಾವಣಾ ತಂತ್ರಕ್ಕೆ ವೇದಿಕೆಯನ್ನು ಸಿದ್ಧಪಡಿಸುವುದಂತೂ ಸತ್ಯ. ಲೋಕಸಭೆ ಚುನಾವಣೆಯಲ್ಲಿ ತಮ್ಮ ಪಕ್ಷ ಇಂಡಿಯಾ ಮೈತ್ರಿ ಕೂಟಕ್ಕೆ ಸೇರುವುದಿಲ್ಲ. ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸುವುದು ಬಿಎಸ್‌ಪಿಗೆ ಅನಾನುಕೂಲವಾಗಿದೆ. ಮೇಲ್ವರ್ಗದ ಮತಗಳು ಬಿಎಸ್ಪಿಗೆ ವರ್ಗಾವಣೆಯಾಗುವುದಿಲ್ಲ, ದಲಿತ ಮತಗಳು ವರ್ಗಾವಣೆಯಾಗುತ್ತವೆ ಎಂದು ಹೇಳಿದ್ದಾರೆ.
ಒಂದೊಮ್ಮೆ ಇಂಡಿಯಾ ಮೈತ್ರಿಕೂಟಕ್ಕೆ ಸೇರಿದರೆ ಲಾಭ ಕಡಿಮೆ ನಷ್ಟವೇ ಹೆಚ್ಚು, ನಮ್ಮ ಮತಗಳ ಶೇಕಡಾವಾರು ಪ್ರಮಾಣವೂ ಕಡಿಮೆಯಾಗುತ್ತದೆ ಮತ್ತು ಇತರೆ ಪಕ್ಷಗಳಿಗೆ ಲಾಭವಾಗುತ್ತದೆ. ನಮ್ಮ ಪಕ್ಷ ಲೋಕಸಭೆ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸುವ ಮೂಲಕ ಉತ್ತಮ ಫಲಿತಾಂಶ ತರಲಿದೆ. ಮೈತ್ರಿ ಮಾಡಿಕೊಂಡರೆ ಬಿಎಸ್ಪಿಯ ಸಂಪೂರ್ಣ ಮತವು ಮೈತ್ರಿ ಪಕ್ಷಕ್ಕೆ ಹೋಗುತ್ತದೆ ಎಂದಿದ್ದಾರೆ. ಚುನಾವಣೆ ಮುಗಿದ ಬಳಿಕ ಮೈತ್ರಿ ಬಗ್ಗೆ ಆಲೋಚನೆ ಮಾಡುತ್ತೇವೆ ಎಂದು ಮಾಯಾವತಿ ಹೇಳಿದ್ದಾರೆ.
ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) 2019ರ ಲೋಕಸಭೆ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು ಸ್ಪರ್ಧಿಸಿತ್ತು.