ನವದೆಹಲಿ: ವಿದ್ಯಾರ್ಥಿಗಳು ರಾಜಕೀಯಕ್ಕಾಗಿ ಶಿಕ್ಷಣದೊಂದಿಗೆ ರಾಜಿಯಾಗಬೇಡಿ ಎಂದು ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ಉಪಕುಲಪತಿ ಶಾಂತಿಶ್ರೀ ಡಿ. ಪಂಡಿತ್ ಕಿವಿಮಾತು ಹೇಳಿದ್ದಾರೆ.
ಪಂಡಿತ್ ಅವರು ಸುದ್ದಿಸಂಸ್ಥೆ ಪಿಟಿಐಗೆ ನೀಡಿರುವ ಸಂದರ್ಶನದಲ್ಲಿ, ವಿವಿ ಆವರಣದಲ್ಲಿ ಧರಣಿಗಳನ್ನು ನಡೆಸುವುದರ ವಿರುದ್ಧ ಕ್ರಮ ಜಾರಿಗೊಳಿಸಲು ಯೋಜಿಸಿರುವ ಬಗ್ಗೆ ಮಾತನಾಡಿದ್ದಾರೆ.
'ಪ್ರತಿಭಟನೆಗಳನ್ನು ಮಾಡಬೇಡಿ ಎಂದು ಯಾರೂ ಹೇಳುವುದಿಲ್ಲ. ಆದರೆ, ಆ ಸಮಯದಲ್ಲಿ ನಿಮ್ಮ ಶೈಕ್ಷಣಿಕ ಚಟುವಟಿಕೆಗಳು ನಿಲ್ಲಬಾರದು. ಇದರಿಂದ ಭವಿಷ್ಯದಲ್ಲಿ ತೊಂದೆಯಾಗಲಿದೆ' ಎಂದು ಎಚ್ಚರಿಸಿದ್ದಾರೆ.
ಇಸ್ರೇಲ್-ಹಮಾಸ್ ಸಂಘರ್ಷದ ಕುರಿತು ವಿವಿಯಲ್ಲಿ ಮುಕ್ತ ಚರ್ಚೆಗಳು ಮತ್ತು ಉಪನ್ಯಾಸ ಕಾರ್ಯಕ್ರಮಗಳು ನಡೆದಿವೆ ಎಂಬುದನ್ನು ಉಲ್ಲೇಖಿಸಿರುವ ಪಂಡಿತ್, ಈ ವಿಚಾರವಾಗಿ ಯಾವುದೇ ಪ್ರತಿಭಟನೆಗಳು ನಡೆದಿಲ್ಲ. ಇದು ವಿವಿ ಆವರಣದಲ್ಲಿನ ವಿಮರ್ಶಾತ್ಮಕ ಚಿಂತನೆ ಸಂಸ್ಕೃತಿಯನ್ನು ತೋರಿಸುತ್ತದೆ ಎಂದು ಒತ್ತಿ ಹೇಳಿದ್ದಾರೆ.
ಜೆಎನ್‌ಯು ಕುಲಪತಿಯಾಗಿ 2022ರಲ್ಲಿ ಅಧಿಕಾರ ವಹಿಸಿಕೊಂಡ ಪಂಡಿತ್ ಅವರು, 2019ರಲ್ಲಿ ಶುಲ್ಕ ಏರಿಕೆಯನ್ನು ವಿರೋಧಿಸಿ ಪ್ರತಿಭಟಿಸಿದ್ದ ಎಲ್ಲ ವಿದ್ಯಾರ್ಥಿಗಳ ಮೇಲಿನ ಪ್ರಕರಣಗಳನ್ನು ಹಿಂಪಡೆದಿದ್ದರು. ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಅವರು ಈ ಕ್ರಮ ಕೈಗೊಂಡಿದ್ದರು.
ವಿದ್ಯಾರ್ಥಿಗಳು ತಮಗಿರುವ ಸ್ವಾತಂತ್ರ್ಯವನ್ನು ಜವಾಬ್ದಾರಿಯುತವಾಗಿ ವ್ಯಕ್ತಪಡಿಸಬೇಕು ಎಂದಿರುವ ಉಪಕುಲಪತಿಯವರು, ವಿವಿ ಆವರಣದಲ್ಲಿ ಸಿಬ್ಬಂದಿ ಹಾಗೂ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸುವುದು, ಮದ್ಯ ಸೇವನೆ ಮತ್ತು ವೇಗವಾಗಿ ವಾಹನ ಚಲಾಯಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ವಿವಿಯ ಆಡಳಿತವು ಮುಖ್ಯ ಶಿಸ್ತುಪಾಲನಾ ಕಚೇರಿ (ಸಿಪಿಒ) ಕೈಪಿಡಿಯಲ್ಲಿ ತಿಳಿಸಿದೆ ಎಂದು ಹೇಳಿದ್ದಾರೆ.
ಸಿಪಿಒ ಪರಿಷ್ಕೃತ ಕೈಪಿಡಿಯನ್ನು ಕಳೆದ ವರ್ಷ ನವಂಬರ್‌ನಲ್ಲಿ ಬಿಡುಗಡೆ ಮಾಡಿದ್ದ ವಿಶ್ವವಿದ್ಯಾಲಯ, ನಿಷೇಧಿತ ಸ್ಥಳಗಳಲ್ಲಿ ಪ್ರತಿಭಟನೆ ನಡೆಸಿದರೆ ₹ 20,000 ದಂಡ ಹಾಗೂ ರಾಷ್ಟ್ರ ವಿರೋಧಿ ಘೋಷಣೆಗಳನ್ನು ಕೂಗಿದರೆ ₹ 10,000 ದಂಡ ವಿಧಿಸುವುದಾಗಿ ತಿಳಿಸಿತ್ತು.
ವಿವಿ ಆಡಳಿತವು ದಂಡ ಮೊತ್ತವನ್ನು ಹೆಚ್ಚಿಸಿಲ್ಲ. ಆದರೆ, ಪ್ರಕರಣಗಳಿಗೆ ಅನುಸಾರ ತೀರ್ಮಾನ ಕೈಗೊಳ್ಳಲು ಸಿಪಿಒಗೆ ಸೂಚನೆ ಇದೆ ಎಂದು ಸ್ಪಷ್ಟಪಡಿಸಿದ್ದಾರೆ.
ಇದೇ ವೇಳೆ ಅವರು, ಕಳೆದ ಎರಡು ವರ್ಷಗಳ ತಮ್ಮ ಅವಧಿಯಲ್ಲಿ ವಿವಿಯಲ್ಲಿ ಕಾನೂನುಬಾಹಿರ ಚಟವಟಿಕೆಗಳು ಗಣನೀಯವಾಗಿ ಕುಸಿದಿವೆ ಎಂದೂ ಹೇಳಿಕೊಂಡಿದ್ದಾರೆ.