ನಾಗ್ಪುರ: ಲಂಚ ಪಡೆದ ಆರೋಪದ ಮೇಲೆ ಪೆಟ್ರೋಲಿಯಂ ಮತ್ತು ಸ್ಫೋಟಕಗಳ ಸುರಕ್ಷತಾ ಸಂಸ್ಥೆಯ (PESO) ಇಬ್ಬರು ಅಧಿಕಾರಿಗಳು ಸೇರಿದಂತೆ ನಾಲ್ವರನ್ನು ಕೇಂದ್ರೀಯ ತನಿಖಾ ದಳ (ಸಿಬಿಐ) ಬಂಧಿಸಿದೆ. ಬಂಧಿತರಿಂದ ಒಟ್ಟು ₹2.25 ಕೋಟಿ ನಗದು ವಶಪಡಿಸಿಕೊಳ್ಳಲಾಗಿದೆ.
ನಾಗ್ಪುರ: ಲಂಚ ಪಡೆದ ಆರೋಪದ ಮೇಲೆ ಪೆಟ್ರೋಲಿಯಂ ಮತ್ತು ಸ್ಫೋಟಕಗಳ ಸುರಕ್ಷತಾ ಸಂಸ್ಥೆಯ (PESO) ಇಬ್ಬರು ಅಧಿಕಾರಿಗಳು ಸೇರಿದಂತೆ ನಾಲ್ವರನ್ನು ಕೇಂದ್ರೀಯ ತನಿಖಾ ದಳ (ಸಿಬಿಐ) ಬಂಧಿಸಿದೆ. ಬಂಧಿತರಿಂದ ಒಟ್ಟು ₹2.25 ಕೋಟಿ ನಗದು ವಶಪಡಿಸಿಕೊಳ್ಳಲಾಗಿದೆ.
ಬಂಧಿತರಲ್ಲಿ ನಾಗ್ಪುರದ ನಿವಾಸಿ ಪ್ರಿಯದರ್ಶನ್ ದಿನಕರ್ ದೇಶಪಾಂಡೆ, ರಾಜಸ್ಥಾನದ ಚಿತ್ತೋರ್‌ಗಢ ಜಿಲ್ಲೆಯ ಸೂಪರ್ ಶಿವಶಕ್ತಿ ಕೆಮಿಕಲ್‌ನ ನಿರ್ದೇಶಕ ದೇವಿ ಸಿಂಗ್ ಕಚವಾಹ ಸೇರಿದ್ದಾರೆ ಎಂದು ಸಿಬಿಐನ ಭ್ರಷ್ಟಾಚಾರ ನಿಗ್ರಹ ದಳ ದಾಖಲಿಸಿರುವ ಎಫ್‌ಐಆರ್‌ನಲ್ಲಿ ಉಲ್ಲೇಖಿಸಿದೆ.
ಇದಲ್ಲದೆ, ಪಿಇಎಸ್‌ಒನೊಂದಿಗೆ ಕಾರ್ಯನಿರ್ವಹಿಸುತ್ತಿರುವ ಇಬ್ಬರು ಉಪ ಮುಖ್ಯ ನಿಯಂತ್ರಕರನ್ನು ಸಹ ಬಂಧಿಸಲಾಗಿದೆ ಎಂದು ಸಿಬಿಐನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸ್ಫೋಟಕಗಳು, ಸಂಕುಚಿತ ಅನಿಲಗಳು ಮತ್ತು ಪೆಟ್ರೋಲಿಯಂನಂತಹ ಅಪಾಯಕಾರಿ ವಸ್ತುಗಳ ಸುರಕ್ಷತೆಯನ್ನು ನಿಯಂತ್ರಿಸಲು ಪಿಇಎಸ್‌ಒ ಒಂದು ನೋಡಲ್ ಸರ್ಕಾರಿ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತದೆ.
ಬುಧವಾರ ಸಂಜೆ ಸೆಮಿನರಿ ಹಿಲ್ಸ್‌ನಲ್ಲಿರುವ ಪಿಇಎಸ್‌ಒ ಕಚೇರಿ ಬಳಿ ಟೈಪಿಂಗ್ ಅಂಗಡಿಯಲ್ಲಿ ದೇಶಪಾಂಡೆ ಮತ್ತು ಕಚ್ಚವಾಹ ಅವರು ₹10 ಲಕ್ಷ ನಗದು ಸ್ವೀಕರಿಸುತ್ತಿದ್ದಾಗ ಸಿಬಿಐ ಬಂಧಿಸಿದೆ.
ಬಳಿಕ ಸಂಸ್ಥೆಯು ದೇಶಪಾಂಡೆ ಅವರ ನಿವಾಸದಿಂದ ₹1.25 ಕೋಟಿ ಮತ್ತು ಆರೋಪಿ ಪಿಇಎಸ್‌ಒ ಅಧಿಕಾರಿಯೊಬ್ಬನ ಕಚೇರಿಯಿಂದ ₹90 ಲಕ್ಷ ವಶಕ್ಕೆ ಪಡೆದಿದೆ.
'ಎಲ್ಲಾ ಆರೋಪಿಗಳನ್ನು ಗುರುವಾರ ಸಂಜೆ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು. ಭ್ರಷ್ಟಾಚಾರ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಸಿಬಿಐನ ಉಪ ಐಜಿಪಿ ಸಲೀಂ ಖಾನ್ ಅವರ ಮಾರ್ಗದರ್ಶನದಲ್ಲಿ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ' ಎಂದು ಅಧಿಕಾರಿಗಳು ತಿಳಿಸಿದ್ದಾರೆ.