ದೆಹಲಿ: ಪೊಂಗಲ್ ಹಬ್ಬವು 'ಏಕ ಭಾರತ ಶ್ರೇಷ್ಠ ಭಾರತ'ದ ರಾಷ್ಟ್ರೀಯ ಮನೋಭಾವವನ್ನು ಪ್ರತಿಬಿಂಬಿಸುತ್ತದೆ. ಈ ಏಕತೆಯ ಭಾವನೆಯು 2047ರ ವೇಳೆಗೆ ವಿಕಸಿತ ಭಾರತವನ್ನು ನಿರ್ಮಿಸಲು ದೊಡ್ಡ ಶಕ್ತಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹೇಳಿದರು.
ರಾಷ್ಟ್ರ ರಾಜಧಾನಿಯಲ್ಲಿ ಕೇಂದ್ರ ಸಚಿವ ಎಲ್.ಮುರುಗನ್ ಅವರ ನಿವಾಸದಲ್ಲಿ ನಡೆದ ಪೊಂಗಲ್ ಆಚರಣೆಯನ್ನುದ್ದೇಶಿಸಿ ಮಾತನಾಡಿದ ಮೋದಿ, ತಮಿಳುನಾಡಿನ ಪ್ರತಿಯೊಂದು ಮನೆಯಲ್ಲೂ ಹಬ್ಬದ ಸಂಭ್ರಮ ಮನೆ ಮಾಡಿದೆ. ಈ ಹಬ್ಬ ಎಲ್ಲಾ ಜನರ ಜೀವನದಲ್ಲಿ ಸಂತೋಷ, ಸಮೃದ್ಧಿ ಮತ್ತು ನೆಮ್ಮದಿಯನ್ನು ತರಲಿ ಎಂದು ಹಾರೈಸಿದರು.
ಸಂತ ಕವಿ ತಿರುವಳ್ಳುವರ್ ಅವರನ್ನು ಉಲ್ಲೇಖಿಸಿದ ಪ್ರಧಾನಿ, 'ರಾಷ್ಟ್ರ ನಿರ್ಮಾಣದಲ್ಲಿ ವಿದ್ಯಾವಂತ ನಾಗರಿಕರು, ಪ್ರಾಮಾಣಿಕ ಉದ್ಯಮಿಗಳು ಹಾಗೂ ಉತ್ತಮ ಬೆಳೆಗಳ ಪಾತ್ರ'ವನ್ನು ಒತ್ತಿ ಹೇಳಿದರು. ಅಲ್ಲದೇ ರಾಷ್ಟ್ರದ ಏಕತೆಯನ್ನು ಬಲಪಡಿಸುವ ಸಂಕಲ್ಪಕ್ಕೆ ' ನಮ್ಮನ್ನು ನಾವು ಸಮರ್ಪಿಸಿಕೊಳ್ಳೋಣ' ಎಂದು ಕರೆ ನೀಡಿದರು.
ಪೊಂಗಲ್ ಸಮಯದಲ್ಲಿ, ಹೊಸ ಬೆಳೆಯನ್ನು ದೇವರಿಗೆ ಅರ್ಪಿಸುವುದು ಈ ಹಬ್ಬದ ಸಂಪ್ರದಾಯ. ಭಾರತದ ಪ್ರತಿಯೊಂದು ಹಬ್ಬವು ಬೆಳೆ ಮತ್ತು ರೈತರಿಗೆ ಸಂಬಂಧಿಸಿವೆ ಎಂದು ಅವರು ಹೇಳಿದರು.
ರಾಗಿ ಮತ್ತು ತಮಿಳು ಸಂಪ್ರದಾಯಗಳ ನಡುವಿನ ಸಂಬಂಧದ ಕುರಿತು ಮಾತನಾಡಿದ ಅವರು, ರಾಗಿ ಬಗ್ಗೆ ಈಗ ಹೆಚ್ಚು ಅರಿವು ಮೂಡಿದೆ. ಅನೇಕ ಯುವಕರು ರಾಗಿ ಮೇಲೆ ಸ್ಟಾರ್ಟ್‌ಅಪ್ ಉದ್ಯಮಗಳನ್ನು ಕೈಗೊಂಡಿದ್ದಾರೆ. ರಾಗಿ ಕೃಷಿ ಮಾಡುತ್ತಿರುವ 3 ಕೋಟಿಗೂ ಹೆಚ್ಚು ರೈತರು ನೇರ ಲಾಭ ಪಡೆಯುತ್ತಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.
ಸಾಂಪ್ರದಾಯಿಕ ಉಡುಗೆಯಲ್ಲಿ ಪ್ರಧಾನಿ:
ಸಚಿವ ಎಲ್. ಮುರುಗನ್ ಅವರ ನಿವಾಸದಲ್ಲಿ ನಡೆದ ಪೊಂಗಲ್ ಆಚರಣೆಯಲ್ಲಿ ಭಾಗವಹಿಸಿದ ಪ್ರಧಾನಿ ಸಾಂಪ್ರದಾಯಿಕ ಉಡುಗೆ ತೊಟ್ಟು ಗಮನ ಸೆಳೆದಿದ್ದಾರೆ. ಕಪ್ಪು ಕೋಟ್ ಜತೆಗೆ ಬಿಳಿ ಪಂಚೆ ಹಾಗೂ ಎಡ ಭುಜದ ಮೇಲೆ ಶಲ್ಯ ಧರಿಸಿರುವುದನ್ನು 'ಎಎನ್‌ಐ' ಸುದ್ದಿ ಸಂಸ್ಥೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ವಿಡಿಯೊದಲ್ಲಿ ಕಾಣಬಹುದು.
ಬಳಿಕ ಅವರು ಹಸುವಿಗೆ ಪೂಜೆ ಮಾಡಿ, ಆಹಾರ ನೀಡಿ ವಿಧಿ ವಿಧಾನಗಳನ್ನು ನೆರವೇರಿಸಿದ್ದಾರೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಪುದುಚೆರಿ ಲೆಫ್ಟಿನೆಂಟ್ ಗವರ್ನರ್, ತೆಲಂಗಾಣ ರಾಜ್ಯಪಾಲ ತಮಿಳ್ಸೈ ಸೌಂದರರಾಜನ್ ಈ ವೇಳೆ ಉಪಸ್ಥಿತರಿದ್ದರು.