ಲಕ್ನೋ: ಏಕರೂಪ ನಾಗರಿಕ ಸಂಹಿತೆ(UCC)ಯನ್ನು ಜಾರಿಗೆ ತಂದ ದೇಶದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಉತ್ತರಾಖಂಡ ಪಾತ್ರವಾಗಲಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭಾನುವಾರ ಹೇಳಿದರು.
ಲಕ್ನೋದಲ್ಲಿ ನಡೆದ ಉತ್ತರಾಯಣಿ ಕೌತಿಕ್ ಕಾರ್ಯಕ್ರಮದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ರಾಜನಾಥ್ ಸಿಂಗ್ , ಉತ್ತರಾಖಂಡದಲ್ಲಿ 2022ರಲ್ಲಿ ನಡೆದ ರಾಜ್ಯ ವಿಧಾನಸಭಾ ಚುನಾವಣೆಯ ಪೂರ್ವದಲ್ಲಿ ಬಿಜೆಪಿ ನೀಡಿದ ಪ್ರಮುಖ ಚುನಾವಣಾ ಭರವಸೆಗಳಲ್ಲಿ ಏಕರೂಪ ನಾಗರಿಕ ಸಂಹಿತೆಯೂ ಒಂದಾಗಿದೆ.
ಸತತ ಎರಡನೇ ಅವಧಿಗೆ ಅಧಿಕಾರಕ್ಕೇರಿದ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರ ನೇತೃತ್ವದ ಮೊದಲ ಕ್ಯಾಬಿನೆಟ್ ಸಭೆಯಲ್ಲಿ ಯುಸಿಸಿಯ ಕರಡು ರಚಿಸಲು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ರಂಜನಾ ಪ್ರಕಾಶ್ ದೇಸಾಯಿ ನೇತೃತ್ವದ ಸಮಿತಿಯನ್ನು ಸ್ಥಾಪಿಸಲು ಒಪ್ಪಿಗೆ ನೀಡಿದ್ದರು.
ಉತ್ತರಾಖಂಡವು ಕೇವಲ ದೇವರುಗಳ ನಾಡು, ವೀರರ ನಾಡು ಮಾತ್ರವಲ್ಲದೆ ಈಗ ಅಭಿವೃದ್ಧಿಯ ನಾಡು ಎಂದು ಗುರುತಿಸಲ್ಪಟ್ಟಿದೆ. ಕಳೆದ ಐದು ವರ್ಷಗಳಲ್ಲಿ ರಾಜ್ಯ ಗಮನಾರ್ಹ ಪ್ರಗತಿ ಸಾಧಿಸಿದೆ ಎಂದರು.
ಉತ್ತರ ಪ್ರದೇಶ ಮತ್ತು ಉತ್ತರಾಖಂಡ ನಡುವಿನ ಸಂಬಂಧವನ್ನು ಪ್ರಸ್ತಾಪಿಸಿದ ಅವರು ಉತ್ತರಾಖಂಡವನ್ನು ಉತ್ತರ ಪ್ರದೇಶದಿಂದ ಬೇರ್ಪಡಿಸಿದ ನಂತರ, ಎರಡು ರಾಜ್ಯಗಳ ನಡುವಿನ ಸಂಬಂಧದಲ್ಲಿ ಸ್ವಲ್ಪ ಸಮಯದವರೆಗೆ ಭಿನ್ನಾಭಿಪ್ರಾಯವಿತ್ತು. ನಂತರ ಅಂತಹ ಸಮಸ್ಯೆಗಳು ಉಂಟಾಗಲಿಲ್ಲ. ಆದರೆ ತೆಲಂಗಾಣವನ್ನು ಆಂಧ್ರಪ್ರದೇಶದಿಂದ ಬೇರ್ಪಡಿಸಿ 10 ವರ್ಷಗಳಾದರೂ ಎರಡು ರಾಜ್ಯಗಳ ನಡುವೆ ಹಲವು ಸಮಸ್ಯೆಗಳು ಬಗೆಹರಿಯದೆ ಉಳಿದಿವೆ ಎಂದರು.