ಪೆಶಾವರ: ವಾಯವ್ಯ ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಶಸ್ತ್ರಸಜ್ಜಿತ ಭಯೋತ್ಪಾದಕರು ಸೋಮವಾರ ಪೊಲೀಸ್ ಠಾಣೆಯ ಮೇಲೆ ನಡೆಸಿದ ದಾಳಿಗೆ 10 ಮಂದಿ ಪೊಲೀಸರು ಬಲಿಯಾಗಿದ್ದು ಆರು ಮಂದಿ ಪೊಲೀಸರು ಗಾಯಗೊಂಡಿದ್ದಾರೆ. ಪಾಕಿಸ್ತಾನದಲ್ಲಿ ಫೆಬ್ರುವರಿ 8ರಂದು ಸಾರ್ವತ್ರಿಕ ಚುನಾವಣೆ ನಡೆಯಲಿದ್ದು, ಅದಕ್ಕೆ ಮೂರು ದಿನಗಳ ಮೊದಲು ಈ ದಾಳಿ ನಡೆದಿದೆ.
ದೇರಾ ಇಸ್ಮಾಯಿಲ್ ಖಾನ್ ಜಿಲ್ಲೆಯಲ್ಲಿ ಈ ದಾಳಿ ನಡೆದಿದೆ. ದಾಳಿಗೆ ಇದುವರೆಗೆ ಯಾರೂ ಹೊಣೆ ಹೊತ್ತಿಲ್ಲ. ಭಾರಿ ಪ್ರಮಾಣದಲ್ಲಿ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಭಯೋತ್ಪಾದಕರು ಹಠಾತ್ತನೆ ದಾಳಿ ನಡೆಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ಅಧಿಕಾರಿ ನಸೀರ್ ಮೆಹ್ಮೂದ್ ಹೇಳಿದ್ದಾರೆ.
ಭಯೋತ್ಪಾದಕರು ಪೊಲೀಸ್ ಠಾಣೆಯ ಮೇಲೆ ಎಲ್ಲ ದಿಕ್ಕುಗಳಿಂದಲೂ ದಾಳಿ ನಡೆಸಿದರು. ಪೊಲೀಸರು ಕೂಡ ಪ್ರತಿದಾಳಿ ನಡೆಸಿದರಾದರೂ, ಭಯೋತ್ಪಾದಕರು ತಪ್ಪಿಸಿಕೊಂಡರು.