ಗುವಾಹಟಿ: ಅಸ್ಸಾಂಗೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ₹11,600 ಕೋಟಿ ವೆಚ್ಚದ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದರು.
ಗುವಾಹಟಿಯ ಖಾನಾಪಾರದಲ್ಲಿರುವ ಪಶುವೈದ್ಯಕೀಯ ಕಾಲೇಜು ಮೈದಾನದಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯ ಮತ್ತು ಕೇಂದ್ರದ ಅನುದಾನಿತ ಯೋಜನೆ ಸೇರಿ ಹಲವು ಮೂಲಸೌಕರ್ಯ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು.
ಕಾಮಾಖ್ಯ ದೇವಸ್ಥಾನದ ಕಾರಿಡಾರ್, ಗುವಾಹಟಿಯ ಹೊಸ ವಿಮಾನ ನಿಲ್ದಾಣದಿಂದ ಆರು ಪಥದ ರಸ್ತೆ, ನೆಹರು ಸ್ಟೇಡಿಯಂ ಅನ್ನು ಫಿಫಾ ಗುಣಮಟ್ಟಕ್ಕೆ ಏರಿಸುವ ಯೋಜನೆ ಮತ್ತು ಚಂದ್ರಾಪುರದಲ್ಲಿ ಹೊಸ ಕ್ರೀಡಾ ಸಂಕೀರ್ಣ ನಿರ್ಮಾಣ ಯೋಜನೆ ಸೇರಿ ಇನ್ನೂ ಹಲವು ಯೋಜನೆಗಳಿಗೆ ಚಾಲನೆ ನೀಡಿದರು.
ಶನಿವಾರ ಸಂಜೆ ಅಸ್ಸಾಂಗೆ ಆಗಮಿಸಿದ ಮೋದಿ, ರಾತ್ರಿ ನಗರದ ಕೊಯಿನಾಧಾರ ರಾಜ್ಯ ಅತಿಥಿ ಗೃಹದಲ್ಲಿ ತಂಗಿದ್ದರು.ರಾತ್ರಿ ಬಿಜೆಪಿಯ ರಾಜ್ಯ ಕೋರ್ ಕಮಿಟಿಯ ಪದಾಧಿಕಾರಿಗಳನ್ನು ಭೇಟಿ ಮಾಡಿ ಪಕ್ಷದ ವ್ಯವಹಾರಗಳ ಕುರಿತು ಚರ್ಚಿಸಿದರು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.