ನವದೆಹಲಿ: ಕೇಂದ್ರ ಸಚಿವ ಸಂಪುಟ ಸಭೆ ಮುಕ್ತಾಯಗೊಂಡಿದ್ದು, 2024-25ನೇ ಸಾಲಿನ ಕೇಂದ್ರ ಬಜೆಟ್ ಪ್ರಸ್ತಾವಕ್ಕೆ ಕೇಂದ್ರ ಸಚಿವ ಸಂಪುಟ ಸಭೆ ಅನುಮೋದನೆ ದೊರೆತಿದೆ.
ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ ಮುಕ್ತಾಯವಾಗಿದ್ದು. ಕೇಂದ್ರ ಬಜೆಟ್ ಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಒಪ್ಪಿಗೆ ಪಡೆದಿದ್ದಾರೆ. ಇನ್ನು ಕೆಲವೇ ಕ್ಷಣಗಳಲ್ಲಿ ಲೋಕಸಭೆಯಲ್ಲಿ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಮಂಡನೆ ಮಾಡಲಿದ್ದಾರೆ.
ಇದು ಮೋದಿ ಸರ್ಕಾರದ 2ನೇ ಅವಧಿಯ ಕೊನೆಯ ಬಜೆಟ್ ಆಗಿದೆ. ಚುನಾವಣೆಗೂ ಮುನ್ನ ಮಂಡಿಸಲಿರುವ ಬಜೆಟ್ ಆಗಿರುವುದರಿಂದ ಇದು ಪೂರ್ಣ ಪ್ರಮಾಣದ ಬಜೆಟ್ ಆಗಿರದೆ ಮಧ್ಯಂತರ ಬಜೆಟ್ ಆಗಿರಲಿದೆ.
ಮಧ್ಯಂತರ ಬಜೆಟ್ ಏಕೆ?
ಚುನಾವಣೆಗೆ ಹೋಗುವುದಕ್ಕೂ ಮುನ್ನ ಸರ್ಕಾರಗಳು ಪೂರ್ಣ ಪ್ರಮಾಣದ ಬಜೆಟ್ ಮಂಡಿಸಲು ಸಾಧ್ಯವಿಲ್ಲ. ಹೀಗಾಗಿ ಲೇಖಾನುದಾನ ಅಥವಾ ಮಧ್ಯಂತರ ಬಜೆಟ್ ಮಂಡಿಸಲಾಗುತ್ತದೆ.
ಲೇಖಾನುದಾನ ಅಂದರೆ, ಪ್ರಸಕ್ತ ಹಣಕಾಸು ವರ್ಷದ ಮೊದಲ ಎರಡು ತಿಂಗಳ ಅವಧಿಗೆ ಸರ್ಕಾರಿ ಖರ್ಚುವೆಚ್ಚ ಹಾಗೂ ನೌಕರರ ಸಂಬಳ ಪಾವತಿಗೆ ಬೇಕಾದ ಹಣವನ್ನು ಬೊಕ್ಕಸದಿಂದ ಖರ್ಚು ಮಾಡಲು ಶಾಸನಸಭೆಯಿಂದ ಪಡೆಯುವ ಅನುಮತಿ. ಲೇಖಾನುದಾನವು ಸಂಕ್ಷಿಪ್ತ ಹಣಕಾಸು ದಾಖಲೆಯಾಗಿದ್ದು, ಅದರಲ್ಲಿ ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದ ಅಂಕಿಅಂಶಗಳಷ್ಟೇ ಇರುತ್ತವೆ. ಅದರಲ್ಲಿ ತೆರಿಗೆ ದರಗಳನ್ನು ಬದಲಿಸಲು ಅಥವಾ ಹೊಸ ಯೋಜನೆಗಳನ್ನು ಪ್ರಕಟಿಸಲು ಸಾಧ್ಯವಿಲ್ಲ. ಅಗತ್ಯಬಿದ್ದರೆ ಲೇಖಾನುದಾನವನ್ನು ಇನ್ನೆರಡು ತಿಂಗಳು ವಿಸ್ತರಿಸಬಹುದು.
ಆದರೆ, ಲೇಖಾನುದಾನದ ಬದಲು ಮಧ್ಯಂತರ ಬಜೆಟ್ ಮಂಡಿಸುವ ಪರಿಪಾಠ ಇತ್ತೀಚಿನ ವರ್ಷಗಳಲ್ಲಿದೆ. ಮಧ್ಯಂತರ ಬಜೆಟ್ ಅನ್ನು ಹಣಕಾಸು ವರ್ಷದ ಆರಂಭದಿಂದ ಅಂದರೆ ಏಪ್ರಿಲ್ 1ರಿಂದ ಅನ್ವಯವಾಗುವಂತೆ ನಾಲ್ಕು ತಿಂಗಳ ಅವಧಿಗೆ ಮಂಡಿಸಲಾಗುತ್ತದೆ. ಇದರಲ್ಲಿ ನಾಲ್ಕು ತಿಂಗಳ ಅವಧಿಗೆ ಬೇಕಾದ ಖರ್ಚುವೆಚ್ಚಗಳಿಗೆ ಅನುಮತಿ ಪಡೆಯುವುದರ ಜೊತೆಗೆ, ಹೊಸ ಯೋಜನೆಗಳನ್ನೂ ಘೋಷಿಸಬಹುದು ಹಾಗೂ ತೆರಿಗೆ ದರಗಳನ್ನೂ ಬದಲಿಸಬಹುದು. ಮುಂದೆ ಬರುವ ಸರ್ಕಾರ ಮಂಡಿಸುವ ಪೂರ್ಣ ಪ್ರಮಾಣದ ಬಜೆಟ್‌ನಲ್ಲಿ ಇವುಗಳನ್ನು ಬದಲಿಸಲು ಅವಕಾಶ ಇದ್ದೇ ಇರುತ್ತದೆ. ಜೊತೆಗೆ ಮಧ್ಯಂತರ ಬಜೆಟ್‌ನಲ್ಲಿ ಸರ್ಕಾರದ ಸಾಧನೆಗಳನ್ನು ಹೇಳಿಕೊಳ್ಳಲು, ಈವರೆಗೆ ಆದ ಕೆಲಸಗಳು ಹಾಗೂ ಮುಂದಿನ ಗುರಿಗಳ ಬಗ್ಗೆ ಹೇಳಿಕೊಳ್ಳುವುದಕ್ಕೂ ಅವಕಾಶವಿರುತ್ತದೆ.