ರಾಜಕೀಯ ಮುತ್ಸದ್ಧಿ ಮಣಿಶಂಕರ್ ಅಯ್ಯರ್ ಮತ್ತು ಲೇಖಕ ಗುರುಚರಣ್ ದಾಸ್ ಅವರು ಪಾಕಿಸ್ತಾನದಲ್ಲಿ ತಾವು ಕಳೆದ ಬಾಲ್ಯದ ದಿನಗಳನ್ನು ಹಾರ್ದಿಕವಾಗಿ ಹಂಚಿಕೊಳ್ಳುತ್ತ ಮಾತು ಶುರುಮಾಡಿದರು.
'ಬಾಲ್ಯದಲ್ಲಿ ನನಗೊಂದು ಹೆಸರು ನಿಶ್ಚಿತವಾಗಿರಲಿಲ್ಲ. ಬೋರ್ಡಿಂಗ್ ಸ್ಕೂಲ್‌ಗೆ ಹೋದಾಗ ನನಗೆ ನಾನೇ ಮಣಿಶಂಕರ್ ಎಂದು ಹೆಸರಿಸಿಕೊಂಡಿದ್ದು ನೆನಪಿದೆ. ದೇಶ ವಿಭಜನೆಯಾದಾಗ ಭಾರತಕ್ಕೆ ಬಂದರೂ, ನಂತರ ಪಾಕಿಸ್ತಾನ ಸರ್ಕಾರದ ಜೊತೆಗೆ ಕೆಲಸ ಮಾಡುವ ಅವಕಾಶಗಳು ಸಾಕಷ್ಟು ಬಾರಿ ಎದುರಾಗಿವೆ. ಅಲ್ಲಿನವರು ನನ್ನನ್ನು ಬಹಳ ಮೆಚ್ಚುಗೆ, ಪ್ರೀತಿಯಿಂದ ಬರಮಾಡಿಕೊಂಡಿದ್ದು ವಿಶೇಷ. ಈಗಲೂ ಅಷ್ಟೇ, ಭಾರತವು ಪಾಕಿಸ್ತಾನದ ಜೊತೆಗೆ ನಿರಂತರವಾಗಿ ಮಾತುಕತೆ ನಡೆಸುತ್ತಾ ಬಂದಲ್ಲಿ ಎಷ್ಟೋ ಸಮಸ್ಯೆಗಳಿಗೆ ಉತ್ತರ ಸಿಗಬಹುದು. ಸರ್ಜಿಕಲ್ ದಾಳಿ ಮಾಡಲು ಧೈರ್ಯವಿರುವ ಸರ್ಕಾರಕ್ಕೆ, ಸೌಹಾರ್ದವಾಗಿ ಕುಳಿತು ಮಾತನಾಡುವುದಕ್ಕೆ ಏತಕ್ಕೆ ಧೈರ್ಯ ಇಲ್ಲವೊ ಗೊತ್ತಾಗುವುದಿಲ್ಲ' ಎಂದು ಹೇಳಿದರು.
ವಿದೇಶದಲ್ಲಿ ತತ್ವಶಾಸ್ತ್ರ ಓದಿ, ನಂತರ ಉದ್ಯಮವನ್ನು ನಿರ್ವಹಿಸಿ, ಆ ಬಳಿಕ ಬರಹಗಾರರಾಗಿ ಹೊರಹೊಮ್ಮಿದವರು ಗುರುಚರಣ್ ದಾಸ್. ವಿಭಜನೆಯ ನಂತರ ಲಾಹೋರ್‌ನಿಂದ ಭಾರತಕ್ಕೆ ಹೊರಟ ಆ ದಿನವಿನ್ನೂ ತಮ್ಮ ಕಣ್ಣಮುಂದಿದೆ ಎಂದು ಅವರು ಮಾತಿಗೆ ಶುರುವಿಟ್ಟರು. 'ಜಲಂಧರ್‌ನಿಂದ ಭಾರತದತ್ತ ಹೊರಟ ರೈಲಿನಲ್ಲಿ ಕುಳಿತು ಕಿಟಕಿಯಲ್ಲಿ ನೋಡ ನೋಡುತ್ತಿದ್ದಂತೆಯೇ ಫ್ಲಾಟ್‌ಫಾರ್ಮ್‌ನಲ್ಲಿ ನಿಂತಿದ್ದ ಒಬ್ಬ ಪೊಲೀಸ್‌ಗೆ ಇಬ್ಬರು ವ್ಯಕ್ತಿಗಳು ಹಿಂಬದಿಯಿಂದ ಬಂದು ಇರಿದು ಓಡಿಹೋದರು.
ರಕ್ತಮಯವಾದ ಆ ಕ್ಷಣವನ್ನು ನೋಡುತ್ತಿದ್ದಾಗ ಅಮ್ಮ ಕಿಟಕಿಯನ್ನು ಮುಚ್ಚಿಬಿಟ್ಟಳು. ಈ ಕ್ಷಣಗಳು ನನ್ನನ್ನು ಸದಾ ಕಾಡುತ್ತವೆ' ಎನ್ನುತ್ತ, ತಮ್ಮ ಆತ್ಮಚರಿತ್ರೆಯನ್ನು ಬರೆಯುವಾಗ ಎದುರಾದ ಸಂದಿಗ್ಧತೆಗಳನ್ನು ವಿವರಿಸಿದರು. ಉದ್ಯಮಿಯಾಗಿ ತಾವು ಭಾರತದಲ್ಲಿ ಕಾರ್ಯನಿರ್ವಹಿಸುವಾಗ ಇಲ್ಲಿದ್ದ 'ಲೈಸನ್ಸ್‌ರಾಜ್ ಕಾಲ'ವು ಎಷ್ಟು ಕಠಿಣವಾಗಿತ್ತು ಎಂಬುದು ಇಂದಿನ ಯುವಜನತೆಗೆ ತಿಳಿದಿಲ್ಲ. ವಿನಾ ಕಾರಣ ತಮಗೆ ಬಂಧನದ ನೋಟಿಸ್ ಬಂದ ಘಟನೆಯೊಂದನ್ನು ನಿಭಾಯಿಸಲು ತಾವು ಹೇಗೆ ಹರಸಾಹಸ ಪಡಬೇಕಾಯಿತು ಎನ್ನುವುದನ್ನೂ ಹೇಳಿಕೊಂಡರು. ಆದ್ದರಿಂದ ದೇಶಕ್ಕೆ ನಿಜವಾದ ಸ್ವಾತಂತ್ರ್ಯವು 1991ರಲ್ಲಿ ದೊರೆಯಿತು ಅನಿಸುತ್ತಿದೆ ಎಂದರು.
ಅವರ ಅನಿಸಿಕೆಯೊಂದಿಗೆ ಗೋಷ್ಠಿಯು ಮುಕ್ತಾಯವಾಗಬೇಕೆನ್ನು ವಷ್ಟರಲ್ಲಿ, ಮಣಿಶಂಕರ್ ಅಯ್ಯರ್ ಮೈಕ್ ಪಡೆದು, 'ಗುರುಚರಣ್ ದಾಸ್ ಹೇಳಿಕೆಯನ್ನು ನಾನು ವಿರೋಧಿಸುತ್ತೇನೆ. ಇಡೀ ಘಟನೆಯನ್ನೇ ಅವರು ತಿರುಚಿ ಹೇಳಿದ್ದಾರೆ. ಇಂತಹ ತಿರುಚುವಿಕೆಯ ಪರಿಣಾಮವಾಗಿಯೇ ಭಾರತವು ಇಂದಿನ ಸ್ಥಿತಿಗೆ ಬಂದು ನಿಂತಿದೆ' ಎನ್ನುತ್ತಾ ಗೋಷ್ಠಿಗೆ ಮಂಗಳ ಹಾಡಿದರು. ಇದ್ದಕ್ಕಿದ್ದಂತೆಯೇ ಅವರು ಖಂಡತುಂಡವಾಗಿ ನೀಡಿದ ಹೇಳಿಕೆಯಿಂದ ವಿಚಲಿತರಾದ ಪ್ರೇಕ್ಷಕರು, ಲೇಖಕರಿಬ್ಬರ ಆತ್ಮಕಥೆಗಳನ್ನು ಖರೀದಿಸಿ ಅವರ ಸಹಿ ಪಡೆಯಲು ಸರತಿಯಲ್ಲಿ ನಿಂತರು.