ಕಾಸರಗೋಡು: ನೀಲೇಶ್ವರಂ ನಗರಸಭೆಯ ಕಚೇರಿ ಸಂಕೀರ್ಣ ಒಳಗೊಂಡ ನೂತನ ಬಹುಮಹಡಿ ಕಟ್ಟಡದ ಉದ್ಘಾಟನೆ ಫೆ.26ರಂದು ಬೆಳಗ್ಗೆ 10ಕ್ಕೆ ನಡೆಯುವುದು. ಸ್ಥಳೀಯಾಡಳಿತ ಖಾತೆ ಸಚಿವ ಎಂ.ಬಿ.ರಾಜೇಶ್ ಉದ್ಘಾಟನೆ ನೆರವೇರಿಸುವರು. ನೀಲೇಶ್ವರ ಹೊಳೆಯ ಸನಿಹದ ಕಚೇರಿಕಾಟವ್ ರಸ್ತೆಯಲ್ಲಿ ನಗರಸಭೆ ಖರೀದಿಸಿದ 75 ಸೆಂಟ್ಸ್30,000 ಚದರ ಅಡಿ ವಿಸ್ತೀರ್ಣದಲ್ಲಿ 11.3 ಕೋಟಿ ರೂಪಾಯಿ ವೆಚ್ಚದಲ್ಲಿ ಮೂರು ಅಂತಸ್ತಿನ ಕಟ್ಟಡದ ನಿರ್ಮಾಣ ಪೂರ್ಣಗೊಂಡಿದೆ.
ವಿವಿಧ ವಿಭಾಗಗಳ ಕಾರ್ಯಾಚರಣೆ ಮತ್ತು ಮುಂಭಾಗದ ಕಚೇರಿ ವ್ಯವಸ್ಥೆಯು ಮೊದಲ ಎರಡು ಮಹಡಿಗಳಲ್ಲಿರಲಿದೆ. ವಿವಿಧ ಉದ್ದೇಶಗಳಿಗಾಗಿ ಸಾರ್ವಜನಿಕರಿಗೆ ಅಗತ್ಯವಿರುವ ಎಲ್ಲಾ ಸೌಲಭ್ಯಗಳೊಂದಿಗೆ ಕಚೇರಿಯನ್ನು ಸಜ್ಜುಗೊಳಿಸಲಾಗಿದೆ. ಅಲ್ಲದೆ, 250 ಮಂದಿಗೆ ಕುಳಿತುಕೊಳ್ಳಬಹುದಾದ ಸಮ್ಮೇಳನ ಸಭಾಂಗಣ ಮಹಿಳೆಯರಿಗೆ ವಿಶೇಷ ವಿಶ್ರಾಂತಿ ಕೊಠಡಿ, ಇತರೆ ಸಭೆ ನಡೆಸಲು ಸಭಾಂಗಣ, ಭೋಜನಶಾಳೆ ಸಿದ್ಧಪಡಿಸಲಾಗಿದೆ. ಇದೇ ಕಟ್ಟಡದಲ್ಲಿ ಕೃಷಿ ಭವನ ಹಾಗೂ ಕುಟುಂಬಶ್ರೀ ಕಚೇರಿಗಳು ಕಾರ್ಯಾಚರಿಸಲಿದ್ದು, ಸಾರ್ವಜನಿಕರಿಗೆ ಒಂದೇ ಸೂರಿನಡಿ ವಿವಿಧ ಸೇವೆಗಳು ಲಭ್ಯವಾಗಲಿದೆ. ಕೇರಳ ರಾಜ್ಯದಲ್ಲಿ ಅತ್ಯಂತ ಸುಸಜ್ಜಿತ ನಗರಸಭಾ ಕಟ್ಟಡ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.
15ರಂದು ಸಭೆ:
ಉದ್ಘಾಟನೆಗೆ ಸಂಬಂಧಿಸಿದ ಸಂಘಟನಾ ಸಮಿತಿ ಸಭೆ ಫೆ.15ರಂದು ಸಂಜೆ 4ಕ್ಕೆ ನೀಲೇಶ್ವರಂ ವ್ಯಾಪಾರ ಭವನ ಸಭಾಂಗಣದಲ್ಲಿ ನಡೆಯಲಿದೆ.