ತಿರುವನಂತಪುರಂ: ಈ ವರ್ಷದ ಮಧ್ಯಂತರ ಬಜೆಟ್ ರಾಜ್ಯದ ರೈಲ್ವೆ ಅಭಿವೃದ್ಧಿಗೆ ಇತಿಹಾಸದಲ್ಲೇ ಅತಿ ದೊಡ್ಡ ಬಜೆಟ್ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
ಎರಡನೇ ಮೋದಿ ಸರ್ಕಾರದ ಕೊನೆಯ ಬಜೆಟ್ ನಲ್ಲಿ ಕೇರಳಕ್ಕೆ 2,744 ಕೋಟಿ ರೂ. ಮೀಸಲಿರಿಸಲಾಗಿದೆ. 2009-14ನೇ ಸಾಲಿನಲ್ಲಿ ಮಂಜೂರು ಮಾಡಿದ್ದ ಮೊತ್ತದ ಏಳು ಪಟ್ಟು ಹೆಚ್ಚು ಹಣವನ್ನು ಈ ಬಾರಿ ಕೇಂದ್ರ ನೀಡಿದೆ.
ಕೇರಳದಲ್ಲಿ ಈಗಾಗಲೇ ಆರಂಭವಾಗಿರುವ ಹಳಿ ದ್ವಿಗುಣಗೊಳಿಸುವಿಕೆ, ಟ್ರ್ಯಾಕ್ ನವೀಕರಣ, ನಿಲ್ದಾಣ ಅಭಿವೃದ್ಧಿ ಮತ್ತು ಇತರ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು. ಅಮೃತ್ ಭಾರತ್ ನಿಲ್ದಾಣ ಅಭಿವೃದ್ಧಿ ಯೋಜನೆಯಡಿ 35 ನಿಲ್ದಾಣಗಳಿವೆ. ಇವುಗಳನ್ನು ಆದಷ್ಟು ಶೀಘ್ರದಲ್ಲಿ ಪೂರ್ಣಗೊಳಿಸಲಾಗುವುದು ಎಂದು ಸಚಿವರು ಸ್ಪಷ್ಟಪಡಿಸಿದರು.
ತಿರುವನಂತಪುರಂ-ಕನ್ಯಾಕುಮಾರಿ ಹಳಿ ದ್ವಿಗುಣ ಯೋಜನೆಗೆ 365 ಕೋಟಿ ರೂ., ಆಲಪ್ಪುಳ ಹಳಿ ದ್ವಿಗುಣಕ್ಕೆ 707 ಕೋಟಿ ರೂ., ಎರ್ನಾಕುಳಂ-ಕುಂಬಳಂ ಹಳಿಗೆ 105 ಕೋಟಿ, ಕುಂಬಳಂ-ತುರವೂರ್ ಹಳಿ ಅಭಿವೃದ್ದಿಗೆ 102 ಕೋಟಿ ಮತ್ತು ತುರವೂರು-ಅಂಬಲಪುಳ ಹಳಿ ಅಭಿವೃದ್ದಿಗೆ 500 ಕೋಟಿ ಎಂಬಂತೆ ಒಟ್ಟು 707 ಕೋಟಿ ಮೀಸಲಿಡಲಾಗಿದೆ.
ದಕ್ಷಿಣ ರೈಲ್ವೇಯಲ್ಲಿ ಸ್ವಯಂಚಾಲಿತ ಸಿಗ್ನಲಿಂಗ್ ಯೋಜನೆಗಳಿಗೆ ಮೀಸಲಿಟ್ಟ 42 ಕೋಟಿ ರೂ.ಗಳಿಂದ ಎರ್ನಾಕುಳಂ-ವಳ್ಳತ್ತೋಳ್ ನಗರ ವಿಭಾಗದ ಯೋಜನೆಯು ಪ್ರಯೋಜನ ಪಡೆಯಲಿದೆ. ಅಂಗಮಾಲಿ-ಎರುಮೇಲಿ ಶಬರಿಮಲೆ ರಸ್ತೆಗೆ ಈ ವರ್ಷವೂ 100 ಕೋಟಿ ರೂ.ಮೀಸಲಿರಿಸಲಾಗಿದೆ. ಯೋಜನೆಯ ವೆಚ್ಚ ಹಂಚಿಕೆಗೆ ಸಂಬಂಧಿಸಿದಂತೆ ಕೇರಳ ತನ್ನ ನಿಲುವನ್ನು ಸ್ಪಷ್ಟಪಡಿಸಿದರೆ ಮಾತ್ರ ಕೇಂದ್ರವು ಯೋಜನೆಯನ್ನು ಪರಿಗಣಿಸುತ್ತದೆ. ಕಳೆದ ವರ್ಷ ಪಡೆದಿದ್ದ 100 ಕೋಟಿ ಹಿಂತಿರುಗಿಸಲಾಗಿದೆ. ಇದಲ್ಲದೇ ಫ್ಲೈಓವರ್ ಅಭಿವೃದ್ಧಿ ಹಾಗೂ ಪಿಟ್ ಲೈನ್ ಯೋಜನೆಗಳಿಗೆ ಗಣನೀಯ ಮೊತ್ತವನ್ನು ಮೀಸಲಿಡಲಾಗಿದೆ.