ಲಂಡನ್: ಸುಮಾರು 285 ವರ್ಷಗಳ ಹಿಂದಿನ ನಿಂಬೆ ಹಣ್ಣೊಂದು ಬರೋಬ್ಬರಿ 1,416 ಪೌಂಡ್ (1,48,000 ರೂಪಾಯಿ)ಗೆ ಮಾರಾಟವಾಗುವ ಮೂಲಕ ಎಲ್ಲೆ ಹುಬ್ಬೇರಿಸಿದೆ.
ಪುರಾತನ ಕಾಲದ ನಿಂಬೆ ಅವಶೇಷವು 19 ನೇ ಶತಮಾನದ ಕ್ಯಾಬಿನೆಟ್‌ನಲ್ಲಿ ಕಾಣಿಸಿಕೊಂಡಿತು ಮತ್ತು ಯುಕೆಯ ಶ್ರಾಪ್‌ಶೈರ್‌ನಲ್ಲಿರುವ ಬ್ರೆಟ್ಟೆಲ್ಸ್ ಹರಾಜುದಾರರಿಗೆ, ಚಿಕ್ಕಪ್ಪನಿಂದ ಆನುವಂಶಿಕವಾಗಿ ಪಡೆದ ಕುಟುಂಬವೊಂದು ಪ್ರಸ್ತುತಪಡಿಸಿದೆ ಎಂದು ತಿಳಿದುಬಂದಿದೆ.
ನಿಂಬೆಯ ಮೇಲೆ ಕೆತ್ತಿರುವ ಸಂದೇಶವೂ ಅದರ ಇತಿಹಾಸವನ್ನು ಪರಿಚಯಿಸಿದೆ. ಮಿಸ್ ಇ ಬಾಕ್ಸ್ಟರ್‌ಗೆ ಪಿ ಲು ಫ್ರಾಂಚಿನಿ ಎಂಬುವರು 1739ರ ನವೆಂಬರ್ 4 ರಂದು ನೀಡಲಾಯಿತು ಎಂಬ ಸಂದೇಶವಿದೆ. ದಿ ಸನ್ ವೆಬ್ಸೈಟ್ ವರದಿ ಪ್ರಕಾರ, ನಿಂಬೆ ಮೂಲವೂ ವಸಾಹತುಶಾಹಿ ಭಾರತಕ್ಕೆ ಹಿಂದಿನದು ಎಂದು ನಂಬಲಾಗಿದೆ. ಇದನ್ನು ರೊಮ್ಯಾಂಟಿಕ್ ಗಿಫ್ಟ್ ಆಗಿ ಇಂಗ್ಲೆಂಡ್‌ಗೆ ಸಾಗಿಸಲಾಯಿತು ಎನ್ನಲಾಗಿದೆ.
ಹರಾಜುಗಾರ ಡೇವಿಡ್ ಬ್ರೆಟ್ಟೆಲ್ ಹರಾಜಿನಲ್ಲಿ ನಿಂಬೆಹಣ್ಣನ್ನು ಸೇರಿಸುವ ನಿರ್ಧಾರದ ಬಗ್ಗೆ ವಿವರಿಸಿದರು, ನಾವು ಸ್ವಲ್ಪ ಮೋಜು ಮಾಡಬೇಕೆಂಬ ಉದ್ದೇಶದಿಂದ £40 (4,225 ರೂ.)- £60 (6,337 ರೂ.) ಪೌಂಡ್ ಬೆಲೆಯಲ್ಲಿ ನಿಂಬೆಯನ್ನು ಹರಾಜಿನಲ್ಲಿ ಇರಿಸಿದೆವು. ಎಲ್ಲರಿಗೂ ಆಶ್ಚರ್ಯವಾಗುವಂತೆ ಶತಮಾನಗಳ ಹಳೆಯ ಕಥೆಯೊಂದಿಗೆ ಲಿಂಕ್ ಆಗಿರುವ ನಿಂಬೆಹಣ್ಣು ನ್ಯೂಪೋರ್ಟ್, ಶ್ರಾಪ್‌ಶೈರ್‌ನಲ್ಲಿ ನಡೆದ ಹರಾಜಿನಲ್ಲಿ ಬರೋಬ್ಬರಿ 1,416 ಪೌಂಡ್ (1,48,000 ರೂಪಾಯಿ)ಗೆ ಮಾರಾಟವಾಯಿತು ಎಂದಿದ್ದಾರೆ.