ಒಂದು ವರ್ಷದಲ್ಲಿ ಎಷ್ಟು ದಿನಗಳಿರುತ್ತವೆ ಅಂದ್ರೆ ಥಟ್ ಅಂತ ಎಲ್ಲರು 365 ದಿನ ಎಂದುಬಿಡುತ್ತೇವೆ. ಆದರೆ ಪ್ರತಿ 4 ವರ್ಷಕ್ಕೊಮ್ಮೆ ಈ ಸಂಖ್ಯೆ 366 ದಿನ ಎಂದಾಗುತ್ತದೆ. ಹೌದು ಇದು ಅಧಿಕ ವರ್ಷ ಎಂಬ ವಿಶೇಷ ವರ್ಷದಲ್ಲಿ ಒಂದು ದಿನ ಹೆಚ್ಚಾಗುತ್ತದೆ. ಈ ಬಗ್ಗೆ ನಮಗೂ ಅರಿವಿದೆ.
ಆದರೆ ಪ್ರತಿ 4 ವರ್ಷಕ್ಕೊಮ್ಮೆ ಅಧಿಕ ವರ್ಷ ಬರುವುದೇಕೆ? ಮೊದಲು ಅಧಿಕ ವರ್ಷ ಆರಂಭಿಸಿದ್ದು ಯಾರು? ಯಾವ ಕಾರಣಕ್ಕಾಗಿ ಅಧಿಕ ವರ್ಷ ಎಂಬ ವಿಶೇಷ ನಿಯಮ ಜಾರಿ ಮಾಡಿದ್ದರು ಎಂಬ ಪ್ರಶ್ನೆಗಳು ನಮ್ಮ ಮುಂದೆ ಬರುತ್ತವೆ. ಒಂದು ದಿನ ಹೆಚ್ಚು ಮಾಡಿದರೆ ಏನೆಲ್ಲಾ ಆಗುತ್ತದೆ. ಕಡಿಮೆ ಮಾಡಿದರೆ ಏನೆಲ್ಲಾ ಆಗುತ್ತದೆ ಎಂಬೆಲ್ಲಾ ಪ್ರಶ್ನೆಗಳಿಗೆ ಇಲ್ಲಿ ಉತ್ತರ ನೀಡುವ ಪ್ರಯತ್ನ ಮಾಡಲಾಗಿದೆ.ಪ್ರತಿ 4 ವರ್ಷಕ್ಕೊಮ್ಮೆ ಈ ಅಧಿಕ ವರ್ಷ ಬರುತ್ತದೆ. ಹಾಗಾಗಿ ಈ ವರ್ಷ ಫೆಬ್ರವರಿಯಲ್ಲೂ 29ನೇ ದಿನ ಬಂದಿದೆ. ಅಂದರೆ ಅಧಿಕ ವರ್ಷದಲ್ಲಿ 'ಫೆಬ್ರವರಿ 29' ದಿನಾಂಕವಿರುತ್ತದೆ. ಇಂದು, ಅಧಿಕ ದಿನ ಮತ್ತು 2024 ಅಧಿಕ ವರ್ಷವಾಗಿದೆ. ಒಂದು ಹೆಚ್ಚುವರಿ ದಿನವನ್ನು ಸೇರಿಸುವ ಹಿಂದಿನ ಮುಖ್ಯ ಕಾರಣವೆಂದರೆ ಸಾಮಾನ್ಯ ಕ್ಯಾಲೆಂಡರ್ ವರ್ಷಗಳನ್ನು ಖಗೋಳ ವರ್ಷಗಳೊಂದಿಗೆ ಸರಿಪಡಿಸುವುದು ಮತ್ತು ಹೊಂದಾಣಿಕೆ ಮಾಡುವುದು.
ಫೆಬ್ರವರಿ 29, 4 ವರ್ಷಗಳಲ್ಲಿ ಒಮ್ಮೆ ಮಾತ್ರ ಸಂಭವಿಸುತ್ತದೆ. ಪ್ರತಿ ವರ್ಷ 365 ದಿನಗಳನ್ನು ಹೊಂದಿದ್ದರೂ, ಸೂರ್ಯನನ್ನು ಪರಿಭ್ರಮಿಸಲು ಭೂಮಿಯು 365 ದಿನಗಳಿಗಿಂತ ಸ್ವಲ್ಪ ಹೆಚ್ಚು ಸಮಯ ತೆಗೆದುಕೊಳ್ಳುವುದರಿಂದ ಹೆಚ್ಚುವರಿ ದಿನವನ್ನು ಸೇರಿಸಲಾಗುತ್ತದೆ.
ನಿಖರವಾಗಿ ಲೆಕ್ಕ ಹಾಕಿದಾಗ ಭೂಮಿಯು ಸೂರ್ಯನ ಸುತ್ತ ಒಂದು ಸುತ್ತು ಹಾಕಲು 365.242189 ದಿನಗಳು ಅಥವಾ 365 ದಿನ 5 ಗಂಟೆ, 48 ನಿಮಿಷ ಮತ್ತು 45 ಸೆಕೆಂಡ್ ಸಮಯ ತೆಗೆದುಕೊಳ್ಳುತ್ತದೆ. ಈ ಸಂಖ್ಯೆಯನ್ನು 4 ವರ್ಷಗಳ ಬಳಿಕ ಒಟ್ಟು ಮಾಡಿದಾಗ 24 ಗಂಟೆಯಾಗುತ್ತದೆ. ಹೀಗಾಗಿ 4 ವರ್ಷಕ್ಕೊಮ್ಮೆ ಒಂದು ದಿನವನ್ನು ಸೇರಿಸಲಾಗುತ್ತದೆ. ಅದನ್ನು ಫೆಬ್ರವರಿಯಲ್ಲೇ ಸೇರಿಸಲಾಗಿದೆ.
ಮೊದಲು ಜೂಲಿಯನ್ ಕ್ಯಾಲೆಂಡರ್‌ನಲ್ಲಿ ಅಧಿಕ ವರ್ಷಗಳನ್ನು 366 ದಿನಗಳೊಂದಿಗೆ ಸೇರಿಸುವ ಅಭ್ಯಾಸ ಪ್ರಾರಂಭವಾಯಿತು. ಆದರೆ ಅಧಿಕ ವರ್ಷದಲ್ಲಿ ಫೆಬ್ರವರಿ 23 ಎರಡು ಬಾರಿ ಬರುತ್ತಿತ್ತು. ಆದರೆ ಫೆಬ್ರವರಿಯಲ್ಲಿ 29 ಬರುತ್ತಿರಲಿಲ್ಲ. ಈ ರೀತಿ ಒಂದೇ ದಿನ ಎರಡು ಬಾರಿ ಬರುತ್ತಿರುವುದರಿಂದ ಸಮಸ್ಯೆಯಾಗಿತ್ತು. ಹೀಗಾಗಿ ಫೆ.23ನ್ನು ಒಂದೇ ಬಾರಿ ಬರುವಂತೆ ಮಾಡಿ ಅಧಿಕ ವರ್ಷದಂದು ಫೆ.29ನ್ನು ಪರಿಚಯಿಸಲಾಯಿತು.
ಆದರೆ ಈ ಅಧಿಕ ವರ್ಷದಲ್ಲೂ ಸಮಸ್ಯೆ ಎದುರಾಗಿತ್ತು, ರೋಮನ್ನರು ಕ್ಯಾಲೆಂಡರ್ ವರ್ಷವನ್ನು ಸೌರ ವರ್ಷಕ್ಕಿಂತ 6 ಗಂಟೆಗಳಷ್ಟು ಕಡಿಮೆ ಎಂದು ತೆಗೆದುಕೊಂಡರೂ, 4 ವರ್ಷದಲ್ಲಿ ನಿಜವಾದ ವ್ಯತ್ಯಾಸವು 5:48:46 ಗಂಟೆಗಳು ಎಂದು ವಾದವಾಗಿತ್ತು. ನಾಲ್ಕು ವರ್ಷಗಳಲ್ಲಿ ಕ್ಯಾಲೆಂಡರ್ 6 x 4 = 24 ಗಂಟೆಗಳನ್ನು ಸೇರಿಸುವುದು ಸರಿಯಲ್ಲ ಎನ್ನಲಾಯಿತು. ಅದು 5:48:46 x 4 = 23:15:04 ಗಂಟೆಯಾಗಬೇಕಿದೆ. ಹಾಗಾದರೆ ಹೆಚ್ಚುವರಿಯಾಗಿ 45 ನಿಮಿಷಗಳನ್ನು ಇಂದಿಗೂ ತಪ್ಪಾಗಿಯೇ ಗುರುತಿಸುತ್ತಿದ್ದೇವೆ.
ಇದನ್ನೂ ಇನ್ನೂ ಸರಳವಾಗಿ ಹೇಳುವುದಾದರೆ, ಪ್ರತಿ ವರ್ಷ 5 ಗಂಟೆ 48 ನಿಮಿಷ 46 ಸೆಕೆಂಡು ಹೆಚ್ಚುವರಿಯಾಗಿ ಉಳಿಯುತ್ತದೆ ಎಂಬುದು ಲೆಕ್ಕಾಚಾರವಾಗಿದೆ. ಹೀಗಾದರೆ ಪ್ರತಿ 4 ವರ್ಷ ಇದನ್ನೂ ಕೂಡಿದರೆ ಅದು 23 ಗಂಟೆ 15 ನಿಮಿಷ 04 ಸೆಕೆಂಡುಗಳಾಗುತ್ತದೆಯೇ ಹೊರತು 24 ಗಂಟೆಯಾಗುವುದಿಲ್ಲ. ಹೀಗಾಗಿ ನಾವು 45 ನಿಮಿಷ ಹೆಚ್ಚುವರಿಯಾಗಿ ಲೆಕ್ಕ ಹಾಕುತ್ತಿಲ್ಲ ಬದಲಿಗೆ ಅದನ್ನು ಗಣನೆಗೆ ತೆಗೆದುಕೊಂಡಿಲ್ಲ. ಪ್ರತಿ 4 ವರ್ಷಕ್ಕೆ 45 ನಿಮಿಷ ತಪ್ಪಾಗಿ ಲೆಕ್ಕವಾದರೆ, ಪ್ರತಿ ವರ್ಷ 11 ನಿಮಿಷ 14 ಸೆಕೆಂಡುಗಳು ಹೆಚ್ಚಾಗಿ ಉಳಿಯುತ್ತದೆ. ಹೀಗಾಗಿ ಕೇವಲ 11 ನಿಮಿಷದ ವ್ಯತ್ಯಾಸವೆಂದು ಇನ್ನೂ ಯಾರು ತಲೆಕೆಡಿಸಿಕೊಂಡಿಲ್ಲವಷ್ಟೇ.