HEALTH TIPS

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ 370, ಎನ್‌ಡಿಎಗೆ 400 ಸ್ಥಾನ: ಮೋದಿ ವಿಶ್ವಾಸ

           ವದೆಹಲಿ: ಬಿಜೆಪಿ ನೇತೃತ್ವದ ಎನ್‌ಡಿಎ ಭಾರಿ ಬಹುಮತದೊಂದಿಗೆ ಕೇಂದ್ರದಲ್ಲಿ ಸತತ ಮೂರನೇ ಅವಧಿಗೆ ಅಧಿಕಾರಕ್ಕೇರಲಿದೆ ಎಂಬ ವಿಶ್ವಾಸವನ್ನು ಪ್ರಧಾನಿ ನರೇಂದ್ರ ಮೋದಿ ವ್ಯಕ್ತಪಡಿಸಿದ್ದಾರೆ.

            ರಾಷ್ಟ್ರಪತಿಯವರ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆಗೆ ಉತ್ತರವಾಗಿ ಲೋಕಸಭೆಯಲ್ಲಿ ಸೋಮವಾರ ಭಾಷಣ ಮಾಡಿದ ಅವರು, 'ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು 370ಕ್ಕೂ ಅಧಿಕ ಸ್ಥಾನಗಳನ್ನು ಹಾಗೂ ಎನ್‌ಡಿಎ ಮೈತ್ರಿಕೂಟವು 400ಕ್ಕೂ ಅಧಿಕ ಸ್ಥಾನಗಳನ್ನು ಗೆಲ್ಲಲಿದೆ' ಎಂಬ ಭರವಸೆಯ ಮಾತುಗಳನ್ನಾಡಿದರು.

             'ಇಡೀ ದೇಶದಲ್ಲಿ ಬಿಜೆಪಿ ಪರ ಅಲೆ ಇರುವುದನ್ನು ಗಮನಿಸಿದ್ದೇನೆ. ಚುನಾವಣೆಗೆ 100ರಿಂದ 125 ದಿನಗಳ‌ಷ್ಟೇ ಬಾಕಿಯಿವೆ. ಅಬ್‌ ಕೀ ಬಾರ್‌' ಎಂದು ಹೇಳಿದ ಮೋದಿ ಮೌನ ವಹಿಸಿದಾಗ, ಬಿಜೆಪಿ ಸದಸ್ಯರು '400 ಪಾರ್' (400ಕ್ಕೂ ಅಧಿಕ) ಎನ್ನುತ್ತಾ ಚ‍ಪ್ಪಾಳೆ ತಟ್ಟಿ ಸಂಭ್ರಮಿಸಿದರು.

'ನಮ್ಮ ಸರ್ಕಾರವು ಮೂರನೇ ಅವಧಿಯಲ್ಲಿ 'ದೊಡ್ಡ ನಿರ್ಧಾರ'ಗಳನ್ನು ತೆಗೆದುಕೊಳ್ಳಲಿದೆ. ಮುಂದಿನ 1,000 ವರ್ಷಗಳಿಗೆ ಸಮೃದ್ಧ ಭಾರತಕ್ಕೆ ಅಡಿಪಾಯ ಹಾಕುವಂತಹ ಯೋಜನೆಗಳನ್ನು ಕೈಗೆತ್ತಿಕೊಳ್ಳಲಿದ್ದೇವೆ. ದೇಶವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಿ ಬೆಳೆಯಲಿದೆ' ಎಂದು ಭರವಸೆ ನೀಡಿದರು.

               ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ: ಲೋಕಸಭೆಯಲ್ಲಿ ತಮ್ಮ ಎರಡನೇ ಅವಧಿಯ ಕೊನೆಯ ಭಾಷಣ ಮಾಡಿದ ಪ್ರಧಾನಿ, ಕಾಂಗ್ರೆಸ್‌ ಒಳಗೊಂಡಂತೆ ವಿರೋಧ ಪಕ್ಷಗಳನ್ನು ಗುರಿಯಾಗಿಸಿ ಮಾತಿನ ಚಾಟಿ ಬೀಸಿದರು. ತಮ್ಮ 100 ನಿಮಿಷಗಳ ಭಾಷಣದಲ್ಲಿ ಸರ್ಕಾರದ ಸಾಧನೆಗಳನ್ನು ಬಿಡಿಸಿಟ್ಟರು.

'ಪ್ರತಿಪಕ್ಷಗಳಿಗೆ ಇಂದು ಒದಗಿರುವ ದಯನೀಯ ಸ್ಥಿತಿಗೆ ಕಾಂಗ್ರೆಸ್ ಪಕ್ಷವೇ ಪ್ರಮುಖ ಕಾರಣ. ಉತ್ತಮ ಪ್ರತಿಪಕ್ಷ ಆಗುವಂತಹ ಅವಕಾಶ ಕಾಂಗ್ರೆಸ್‌ಗೆ ಲಭಿಸಿತ್ತು. ಆದರೆ, ಕಳೆದ ಹತ್ತು ವರ್ಷಗಳಲ್ಲಿ ತನ್ನ ಜವಾಬ್ದಾರಿಯನ್ನು ನಿಭಾಯಿಸಲು ವಿಫಲವಾಗಿದೆ' ಎಂದು ದೂರಿದರು.

             'ನಾವು ದೊಡ್ಡ ದೊಡ್ಡ ಗುರಿಗಳನ್ನು ಇಟ್ಟುಕೊಂಡು ಮುನ್ನಡೆಯುತ್ತಿರುವುದನ್ನು ಜಗತ್ತು ಬೆರಗಿನಿಂದ ನೋಡುತ್ತಿದೆ. ದೇಶದಲ್ಲಿ ನಡೆಯುತ್ತಿರುವ ಅಭಿವೃದ್ಧಿಯ ವೇಗವನ್ನು ಕಾಂಗ್ರೆಸ್‌ಗೆ ಊಹಿಸಲೂ ಸಾಧ್ಯವಿಲ್ಲ. 80 ಲಕ್ಷ ಗಟ್ಟಿಮುಟ್ಟಾದ ಮನೆಗಳು ಸೇರಿದಂತೆ ಬಡವರಿಗೆ 4 ಕೋಟಿ ಮನೆಗಳನ್ನು ಕಟ್ಟಿಸಿದ್ದೇವೆ. ಈ ಕೆಲಸ ಮಾಡಬೇಕಾದರೆ ಕಾಂಗ್ರೆಸ್‌ಗೆ 100 ವರ್ಷಗಳೇ ಬೇಕಾಗುತ್ತಿದ್ದವು' ಎಂದು ಕುಟುಕಿದರು.

 - ನರೇಂದ್ರ ಮೋದಿ, ಪ್ರಧಾನಿಕಾಂಗ್ರೆಸ್ ಪಕ್ಷವು ಒಂದೇ ಕುಟುಂಬದ ಹಿಡಿತಕ್ಕೆ ಸಿಲುಕಿಕೊಂಡಿದೆ. ಜನರ ಆಕಾಂಕ್ಷೆಗಳು ಮತ್ತು ಸಾಧನೆಗಳನ್ನು ನೋಡಲು ಅವರಿಗೆ ಎಂದಿಗೂ ಸಾಧ್ಯವಾಗಿಲ್ಲ.- ಜಾನ್‌ ಬ್ರಿಟ್ಟಾಸ್ ಸಿಪಿಎಂ ನಾಯಕಈ ದೇಶದಲ್ಲಿ ಪ್ರತಿಯೊಬ್ಬರಿಗೂ ಕನಸು ಕಾಣುವ ಹಕ್ಕು ಇದೆ. 400 ಅಥವಾ 500 ಸ್ಥಾನಗಳ ಕನಸು ಕಾಣುವ ಹಕ್ಕು ಪ್ರಧಾನಿಗೆ ಇದೆ. ಆದರೆ ವಾಸ್ತವ ಬೇರೆಯೇ ಇದೆ.

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರ 'ಮೊಹಬ್ಬತ್‌ ಕಿ ದುಕಾನ್' (ಪ್ರೀತಿಯ ಅಂಗಡಿ) ಘೋಷವಾಕ್ಯಕ್ಕೆ ತಿರುಗೇಟು ನೀಡಿದ ಪ್ರಧಾನಿ, 'ಒಂದೇ ಬಗೆಯ ಉತ್ಪನ್ನವನ್ನು ಪದೇ ಪದೇ ಪರಿಚಯಿಸುತ್ತಿರುವ ಕಾರಣ ಕಾಂಗ್ರೆಸ್‌ ತನ್ನ ಅಂಗಡಿಯನ್ನು ಶೀಘ್ರದಲ್ಲೇ ಮುಚ್ಚಲಿದೆ' ಎಂದರು.

ಮಾಜಿ ಪ್ರಧಾನಿಗಳಾದ ಜವಾಹರಲಾಲ್‌ ನೆಹರು ಮತ್ತು ಇಂದಿರಾ ಗಾಂಧಿ ಅವರ ಹೇಳಿಕೆಗಳನ್ನು ಉಲ್ಲೇಖಿಸಿದ ಪ್ರಧಾನಿ, 'ಭಾರತೀಯರು ಸೋಮಾರಿಗಳು ಮತ್ತು ದಡ್ಡರು ಎಂಬುದು ಕಾಂಗ್ರೆಸ್ ನಾಯಕರ ನಿಲುವಾಗಿತ್ತು' ಎಂದು ಟೀಕಿಸಿದರು.

'ವಿರೋಧ ಪಕ್ಷದ ಹಲವರು ಭರವಸೆ ಕಳೆದುಕೊಂಡಿರುವುದನ್ನು ನಾನು ಗಮನಿಸಿದ್ದೇನೆ. ಚುನಾವಣೆಯನ್ನು ಎದುರಿಸುವ ಶಕ್ತಿಯನ್ನೂ ಕಳೆದುಕೊಂಡಿದ್ದಾರೆ. ಲೋಕಸಭೆಗೆ ಬರುವ ಬದಲು ರಾಜ್ಯಸಭೆಗೆ ಹೋಗಲು ಬಯಸುತ್ತಿದ್ದಾರೆ' ಎಂದು ಲೇವಡಿ ಮಾಡಿದರು.

ಭಾಷಣದ ಪ್ರಮುಖ ಅಂಶಗಳು

* ಕಾಂಗ್ರೆಸ್‌ ಆಡಳಿತದಲ್ಲಿ ಜಾರಿ ನಿರ್ದೇಶನಾಲಯ ಕೇವಲ ₹ 5 ಸಾವಿರ ಕೋಟಿ ವಶಪಡಿಸಿಕೊಂಡಿತ್ತು. ನಮ್ಮ ಸರ್ಕಾರದ ಅವಧಿಯಲ್ಲಿ ಈ ಮೊತ್ತ ₹1 ಲಕ್ಷ ಕೋಟಿ ದಾಟಿದೆ

* ನೆಹರೂ ಮಾಡಿರುವ ತಪ್ಪಿನಿಂದ ಜಮ್ಮು ಮತ್ತು ಕಾಶ್ಮೀರ ಹಾಗೂ ದೇಶದ ಜನರು ಸಂಕಷ್ಟ ಅನುಭವಿಸಬೇಕಾಯಿತು

* ಕಾಂಗ್ರೆಸ್‌ ಹಾಗೂ ಯುಪಿಎ ಸರ್ಕಾರ ಒಬಿಸಿಗೆ ಅನ್ಯಾಯ ಮಾಡಿದೆ

* ವಿರೋಧ ಪಕ್ಷಗಳ ಸದಸ್ಯರು ಈಗ ಇರುವ ಆಸನಗಳಲ್ಲೇ ಬಹುಕಾಲ ಉಳಿಯುವ ಸಂಕಲ್ಪ ಮಾಡಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries