ಕಾಸರಗೋಡು: ಜಿಲ್ಲಾ ಯೋಜನಾ ಸಮಿತಿಯು ಸ್ಥಳೀಯಾಡಳಿತ ಸಂಸ್ಥೆಗಳ 2023-24 ವಾರ್ಷಿಕ ಯೋಜನೆ ತಿದ್ದುಪಡಿ ಯೋಜನೆಗಳ ಅನುಮೋದನೆ, 2023-24 ವಾರ್ಷಿಕ ಯೋಜನೆಯ ಅನುಷ್ಠಾನದ ಪ್ರಗತಿ ಪರಿಶೀಲನೆ ಮತ್ತು 2024-25 ವಾರ್ಷಿಕ ಯೋಜನೆ ರಚನೆಯ ಪ್ರಗತಿಯನ್ನು ಮೌಲ್ಯಮಾಪನ ಮಾಡುವ ನಿಟ್ಟಿನಲ್ಲಿ ಜಿಲ್ಲಾ ಯೋಜನಾ ಸಮಿತಿ ಸಭೆ ಜರುಗಿತು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪಿ.ಬೇಬಿ ಬಾಲಕೃಷ್ಣನ್ ಅಧ್ಯಕ್ಷತೆ ವಹಿಸಿದ್ದರು.
ಎಂಡೋಸಲ್ಫಾನ್ ಪೀಡಿತ ಹಾಗೂ ವಿಕಲಚೇತನರ ಸಮಗ್ರ ಅಭಿವೃದ್ಧಿಗೆ ಯೋಜನೆ ತಯಾರಿಸಲು ವಾರ್ಷಿಕ ಯೋಜನೆಯಲ್ಲಿ ಹಣ ಮೀಸಲಿಡುವಂತೆ ಎಲ್ಲ ಸ್ಥಳೀಯಾಡಳಿತ ಸಂಸ್ಥೆಗಳಿಗೆ ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್ ಸೂಚಿಸಿದರು. ಯೋಜನೆ ತಯಾರಿಗಾಗಿ ಎಲ್ಲ ಪಂಚಾಯಿತಿಗಳಲ್ಲಿ ವಿಕಲಚೇತನರ ಸಮೀಕ್ಷೆ ಆಯೋಜಿಸಲಾಗುವುದು. ಅವರ ಕುಟುಂಬ ಸದಸ್ಯರನ್ನು ಜೊತೆಯಲ್ಲಿಟ್ಟುಕೊಂಡು ಅವರಿಗೆ ಆದಾಯದ ಮೂಲ ಒದಗಿಸುವ ರೀತಿಯಲ್ಲಿ ಯೋಜನೆ ಜಾರಿಗೊಳಿಸಲಾಗುವುದು. ಎಲ್ಲ ಪಂಚಾಯಿತಿಗಳಿಗೂ ನಿಖರ ಮಾರ್ಗಸೂಚಿ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಸಭೆಯಲ್ಲಿ ಜಿಲ್ಲೆಯ ಗ್ರಾ.ಪಂ.ಗಳಲ್ಲಿ ಖಾಲಿ ಇರುವ ಕಾರ್ಯದರ್ಶಿ ಹಾಗೂ ಸಹಾಯಕ ಇಂಜಿನಿಯರ್, ಮೇಲ್ವಿಚಾರಕರ ಹುದ್ದೆಗಳನ್ನು ಭರ್ತಿ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು. ಜಿಲ್ಲಾ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ 'ಹಸಿರು ವನ'ಯೋಜನೆಯನ್ವಯ ರಸ್ತೆ ಬದಿ ಸಸಿ ನೆಡುವ ಯೋಜನೆ ಹಮ್ಮಿಕೊಳ್ಳಲಾಗುವುದು. ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ಹಾಗೂ ಜಿಲ್ಲಾಡಳಿತದ ಸಹಯೋಗದಲ್ಲಿ ಹಸಿರು ವನ ಯೋಜನೆ ರೂಪಿಸಲಾಗುವುದು. 'ಹೈನುಗಾರರಿಗಾಗಿ ರಿವಾಲ್ವಿಂಗ್ ಫಂಡ್, ಮೂರು ಅಂಗನವಾಡಿಗಳಿಗೆ ಕಟ್ಟಡ, ಅಗ್ರಿ ಹಬ್, ಎಬಿಸಿ ಯೋಜನೆ, ವಿಕಲಚೇತನರ ವಿದ್ಯಾರ್ಥಿ ವೇತನ ಯೋಜನೆ ಅನುಷ್ಠಾನಗೊಳಿಸಲಾಗುವುದು.
ತಿದ್ದುಪಡಿಗೆ ಅನುಮೋದನೆ:
46 ಸ್ಥಳೀಯಾಡಳಿತ ಸಂಸ್ಥೆಗಳ 2023-24ನೇ ಸಾಲಿನ ವಾರ್ಷಿಕ ಯೋಜನೆ ತಿದ್ದುಪಡಿಗೆ ಜಿಲ್ಲಾ ಯೋಜನಾ ಸಮಿತಿ ಸಭೆ ಅನುಮೋದನೆ ನೀಡಿದೆ. 37 ಗ್ರಾಮ ಪಂಚಾಯತ್‍ಗಳು, 6 ಬ್ಲಾಕ್ ಪಂಚಾಯತ್‍ಗಳು ಮತ್ತು ನೀಲೇಶ್ವರ, ಕಾಞಂಗಾಡ್ ನಗರಸಭೆಯ ಹಾಗೂ ಜಿಲ್ಲಾ ಪಂಚಾಯಿತಿಯ 2023-24ರ ವಾರ್ಷಿಕ ಯೋಜನೆಗೆ ಅನುಮೋದನೆ ನೀಡಲಾಯಿತು. ಸಹಾಯಕ ಜಿಲ್ಲಾಧಿಕಾರಿ ದಿಲೀಪ್ ಕೆ.ಕೈನಿಕರ, ಜಿ.ಪಂ ಸದಸ್ಯರಾದ ಗೀತಾ ಕೃಷ್ಣನ್, ವಿ.ವಿ.ರಮೇಶನ್, ಎಂ.ಮನು, ಕೆ.ಶಕುಂತಲಾ, ಸಿ.ಜೆ.ಸಜಿತ್, ಡಿಪಿಸಿ ಸರ್ಕಾರಿ ನಾಮನಿರ್ದೇಶಿತ ಸಿ. ರಾಮಚಂದ್ರನ್, ಕೆ.ಮಣಿಕಂಠನ್, ಎ.ಪಿ.ಉಷಾ, ಅಡ್ವ.ಎಸ್.ಎನ್.ಸರಿತಾ, ಜಾಸ್ಮಿನ್ ಕಬೀರ್, ಜಿಲ್ಲಾ ಯೋಜನಾಧಿಕಾರಿ ಟಿ.ರಾಜೇಶ್, ತ್ರಿಸ್ತರ ಪಂಚಾಯಿತಿ ಅಧ್ಯಕ್ಷರು, ಕಾರ್ಯದರ್ಶಿಗಳು, ಕಾರ್ಯನಿರ್ವಹಣಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.