ಕಾಸರಗೋಡು: 138655ಕೊಟಿ ರೂ. ಆದಾಯ ಮತ್ತು 184327ಕೋಟಿ ರೂ, ವೆಚ್ಚ ಹೊಂದಿರುವ ಬಜೆಟನ್ನು ಹಣಕಾಸು ಸಚಿವ ಕೆ. ಎನ್. ಬಾಲಗೋಪಾಲನ್ ಸೋಮವಾರ ವಿಧಾನಸಭೆಯಲ್ಲಿ ಮಂಡಿಸಿದರು. ರಾಜ್ಯದಲ್ಲಿ ಸಚಿವರು ಮಂಡಿಸುತ್ತಿರುವ ನಾಲ್ಕನೇ ಬಜೆಟ್ ಇದಾಗಿದೆ. ಕೇಂದ್ರ ಸರ್ಕಾರ ರಾಜ್ಯದೊಂದಿಗೆ ತೋರುವ ಅವಗಣನೆ ನಡುವೆಯೂ ಮಹತ್ವದ ಸಾಧನೆಗೆ ಸರ್ಕಾರ ಮುಂದಡಿಯಿಡಲಿದೆ. ಮೂರು ಲಕ್ಷ ಕೋಟಿ. ರೂ ಹೂಡಿಕೆಯೊಂದಿಗೆ ಮುಂದಿನ ಮೂರು ವರ್ಷದಲ್ಲಿ ಕೇರಳವನ್ನು ಮೆಡಿಕಲ್ ಹಬ್ ಆಗಿ ಬದಲಾಯಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ. ಪಿಂಚಣಿ ಮೊತ್ತದಲ್ಲಿ ಯಾವುದೇ ಹೆಚ್ಚಳ ಉಂಟುಮಾಡಿಲ್ಲ. ಕೆ-ರೈಲು ಯೋಜನೆಯ ಬಗ್ಗೆಯೂ ಸರ್ಕಾರ ಸ್ಪಷ್ಟ ನಿಲುವು ವ್ಯಕ್ತಪಡಿಸಿಲ್ಲ. ನ್ಯಾಯಾಲಯ ಶುಲ್ಕ, ಮದ್ಯ ದರದಲ್ಲೂ ಹೆಚ್ಚಳ ಮಾಡಲಾಗಿದೆ.
ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್‍ಗೆ 75ಕೋಟಿ ರೂ. ಮೀಸಲಿರಿಸಲಾಗಿದೆ. ಶಬರಿಮಲೆ ಮಾಸ್ಟರ್ ಪ್ಲಾನ್‍ಗಾಗಿ 27.60ಕೋಟಿ, ಕುಟುಂಬಶ್ರೀಗೆ 265ಕೋಟಿ, ಸಾರ್ವಜನಿಕ ಶಿಕ್ಷಣ ಕ್ಷೇತ್ರಕ್ಕೆ 1736.63ಕೋಟಿ, ಸಾರ್ವಜನಿಕ ಆರೋಗ್ಯ ವಲಯಕ್ಕೆ2052.23ಕೋಟಿ, 2025ರ ಮಾರ್ಚ್ ಅಂತ್ಯದ ವೇಳೆಗೆ 5ಲಕ್ಷ ಮನೆಗಳ ನಿರ್ಮಾಣ ಲಕ್ಷ್ಯದೊಂದಿಗೆ ಮುಂದಿನ ವರ್ಷ 1132ಕೋಟಿ ರೂ. ಮೀಸಲಿರಿಸಲಾಗಿದೆ.
ರಬ್ಬರ್ ಸಬ್ಸಿಡಿಗಾಗಿ 180ಕೋಟಿ ರೂ. ಮೀಸಲಿರಿಸಿದೆ. ಸರ್ಕಾರಿ ನೌಕರರಿಗೆ ಹಾಗೂ ಪಿಂಚಣಿದಾರರಿಗೆ ಒಂದು ಗಡು ಡಿ.ಎ ಮಂಜೂರುಗೊಳಿಸಲಾಗುವುದು. ಇದನ್ನು ಏಪ್ರಿಲ್ ತಿಂಗಳ ವೇತನದೊಂದಿಗೆ ಸೇರಿಸಿ ನೀಡಲಾಗುವುದು. ಗೇರು ಬೀಜ ಉದ್ದಿಮೆಗೆ 53.36ಕೋಟಿ, ಕೆಎಸ್ಸಾರ್ಟಿಸಿಗೆ 1120.54ಕೋಟಿ, ಸಹಕಾರಿ ವಲಯಕ್ಕೆ 134.42ಕೊಟಿ, ಪತ್ರಕರ್ತರ ಆರೋಗ್ಯ ವಿಮಾ ಯೋಜನೆಗೆ 25ಲಕ್ಷ ರೂ., ಮೀನುಗಾರಿಕಾ ಬಂದರುಗಳಿಗೆ 9.5ಕೋಟಿ, ಕರಾವಳಿ ಅಭಿವೃದ್ಧಿಗಾಗಿ 136.98ಕೋಟಿ, ಮಣ್ಣು-ಜಲ ಸಂರಕ್ಷಣೆಗಾಗಿ 83.99ಕೋಟಿ, ನಾಳಿಕೇರ ಕೃಷಿ ಅಭಿವೃದ್ಧಿಗಾಗಿ 65ಕೋಟಿ, ಗ್ರಾಮೀಣಾಭಿವೃದ್ಧಿಗೆ 1768.32ಕೋಟಿ ಮೀಸಲಿರಿಸಲಾಗಿದೆ.
ಬಜಕೂಡ್ಲು ಸ್ಟೇಡಿಯಂ ಅಭಿವೃದ್ಧಿಗೆ ಒಂದು ಕೋಟಿ:
ಜಿಲ್ಲೆಯ ಎಣ್ಮಕಜೆ ಪಂಚಾಯಿತಿಯ ಬಜಕೂಡ್ಲು ಸ್ಟೇಡಿಯಂ ಅಭಿವೃದ್ಧಿಗೆ ಒಂದು ಕೋಟಿ ರೂ. ಮೀಸಲಿರಿಸಲಾಗಿದೆ. ಮಂಜೇಶ್ವರ ಶಾಸಕ ಎ.ಕೆ.ಎಂ ಅಶ್ರಫ್ ಅವರು ಶ್ರಮವಹಿಸುವ ಮೂಲಕ ಬಜೆಟ್‍ನಲ್ಲಿ ಈ ಮೊತ್ತ ಮೀಸಲಿರಿಸಲಾಗಿದೆ. ಎಣ್ಮಕಜೆ ಪಂಚಾಯಿತಿ ಅಧ್ಯಕ್ಷ ಜೆ.ಎಸ್ ಸೋಮಶೇಖರ್ ಅವರ ನಿರಂತರ ಒತ್ತಡದ ಹಿನ್ನೆಲೆಯಲ್ಲಿ ಸ್ಟೇಡಿಯಂ ಅಭಿವೃದ್ಧಿಗೆ ಶಾಸಕರು ಮೊತ್ತ ಮೀಸಲಿರಿಸಲು ಶ್ರಮಿಸಿದ್ದಾರೆ. ಪಂಚಾಯಿತಿ ವ್ಯಾಪ್ತಿಯ ಸಂಘ ಸಂಸ್ಥೆಗಳು ಕ್ರೀಡಾಕೂಟಕ್ಕಾಗಿ ಬಜಕೂಡ್ಲು ಸ್ಟೆಡಿಯಮನ್ನು ಅವಲಂಬಿಸುತ್ತಿರುವ ಹಿನ್ನೆಲೆಯಲ್ಲಿ ಪ್ರಸಕ್ತ ಕ್ರೀಡಾಂಗಣವನ್ನು ಅಭಿವೃದ್ಧಿಗೊಳಿಸುವಂತೆ ಬಜಕೂಡ್ಲು ಶ್ರೀ ಮಹಾಲಿಂಗೇಶ್ವರ ಆಟ್ರ್ಸ್ ಮತ್ತು ಸ್ಪೋಟ್ರ್ಸ್ ಕ್ಲಬ್, ಪಂಚಾಯಿತಿ ಅದ್ಯಕ್ಷರಿಗೆ ನಿರಂತರ ಮನವಿ ಸಲ್ಲಿಸುತ್ತಾಬಂದಿತ್ತು.