ವಿಶ್ವಸಂಸ್ಥೆ: 2022 ರಲ್ಲಿ ಭಾರತದಲ್ಲಿ 14.1 ಲಕ್ಷ ಹೊಸ ಕ್ಯಾನ್ಸರ್ ಪ್ರಕರಣಗಳು ವರದಿಯಾಗಿದ್ದು, 9.1 ಲಕ್ಷ ಮಂದಿ ಕ್ಯಾನ್ಸರ್ ಗೆ ಬಲಿಯಾಗಿದ್ದಾರೆ. ಸ್ತನ ಕ್ಯಾನ್ಸರ್ ಸಾಮಾನ್ಯವಾಗಿ ಕಾಡುವ ಕ್ಯಾನ್ಸರ್ ಆಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ಅಂಕಿ-ಅಂಶಗಳು ತಿಳಿಸಿದೆ.
ತುಟಿ, ಬಾಯಿಯ ಕುಹರ ಮತ್ತು ಶ್ವಾಸಕೋಶದ ಕ್ಯಾನ್ಸರ್ ಪುರುಷರಲ್ಲಿ ಹೆಚ್ಚು ಸಾಮಾನ್ಯವಾಗಿದ್ದು ಅನುಕ್ರಮವಾಗಿ 15.6 ಮತ್ತು 8.5 ಪ್ರತಿಶತದಷ್ಟು ಹೊಸ ಪ್ರಕರಣಗಳು ವರದಿಯಾಗಿದೆ. ಆದರೆ ಸ್ತನ ಮತ್ತು ಗರ್ಭಕಂಠದ ಕ್ಯಾನ್ಸರ್ಗಳು ಮಹಿಳೆಯರಲ್ಲಿ ಹೆಚ್ಚಾಗಿ ಕಂಡುಬರುತ್ತವೆ, ಹೊಸ ಪ್ರಕರಣಗಳ ಪೈಕಿ ಈ ಎರಡು ರೀತಿಯ ಕ್ಯಾನ್ಸರ್ ಗಳು ಅನುಕ್ರಮವಾಗಿ ಶೇ.27ರಷ್ಟು ಮತ್ತು ಶೇ.18 ಪ್ರತಿಶತದಷ್ಟಿವೆ ಎಂದು ಇಂಟರ್ನ್ಯಾಷನಲ್ ಏಜೆನ್ಸಿ ಫಾರ್ ರಿಸರ್ಚ್ ಆನ್ ಕ್ಯಾನ್ಸರ್ (IARC), WHO ನ ಕ್ಯಾನ್ಸರ್ ಏಜೆನ್ಸಿ ಅಂದಾಜಿಸಿದೆ.
ಕ್ಯಾನ್ಸರ್ ರೋಗನಿರ್ಣಯದ ನಂತರ 5 ವರ್ಷಗಳಲ್ಲಿ ಜೀವಂತವಾಗಿರುವವರ ಸಂಖ್ಯೆ ಭಾರತದಲ್ಲಿ ಸುಮಾರು 32.6 ಲಕ್ಷ ಎಂದು ವರದಿ ಅಂದಾಜಿಸಿದೆ. ಜಾಗತಿಕವಾಗಿ, 2 ಕೋಟಿ ಹೊಸ ಕ್ಯಾನ್ಸರ್ ಪ್ರಕರಣಗಳು ಮತ್ತು 97 ಲಕ್ಷ ಸಾವುಗಳು ಸಂಭವಿಸಿವೆ ಮತ್ತು ಕ್ಯಾನ್ಸರ್ ರೋಗನಿರ್ಣಯದ ನಂತರ 5 ವರ್ಷಗಳಲ್ಲಿ ಸುಮಾರು 5.3 ಕೋಟಿ ಜನರು ಜೀವಂತವಾಗಿದ್ದಾರೆ ಎಂದು ತಿಳಿದುಬಂದಿದೆ.
ಅಂದಾಜಿನ ಪ್ರಕಾರ, ಪ್ರತಿ ಐವರಲ್ಲಿ ಒಬ್ಬರು ತಮ್ಮ ಜೀವಿತಾವಧಿಯಲ್ಲಿ ಕ್ಯಾನ್ಸರ್ ನ್ನು ಎದುರಿಸುತ್ತಾರೆ ಮತ್ತು ಸರಿಸುಮಾರು 9 ಪುರುಷರಲ್ಲಿ ಒಬ್ಬರು ಮತ್ತು 12 ಮಹಿಳೆಯರಲ್ಲಿ ಒಬ್ಬರು ಈ ಕಾಯಿಲೆಯಿಂದ ಸಾಯುತ್ತಾರೆ ಎಂದು ಅದು ಹೇಳಿದೆ.
ಭಾರತದಲ್ಲಿ ವ್ಯಕ್ತಿಯೋರ್ವನಿಗೆ 75 ವರ್ಷಕ್ಕೆ ಮುಂಚೆಯೇ ಕ್ಯಾನ್ಸರ್ ಬೆಳವಣಿಗೆಯ ಅಪಾಯದ ಪ್ರಮಾಣ ಶೇಕಡಾ 10.6 ರಷ್ಟಿರಲಿದೆ ಎಂದು ಲೆಕ್ಕಹಾಕಲಾಗಿದೆ. ಆದರೆ ಅದೇ ವಯಸ್ಸಿನಲ್ಲಿ ಕ್ಯಾನ್ಸರ್ನಿಂದ ಸಾಯುವ ಅಪಾಯವು 7.2 ಶೇಕಡಾ ಎಂದು ಕಂಡುಬಂದಿದೆ. ಜಾಗತಿಕವಾಗಿ, ಈ ಅಪಾಯಗಳು ಕ್ರಮವಾಗಿ ಶೇಕಡಾ 20 ಮತ್ತು 9.6 ರಷ್ಟಿದೆ.