ನವದೆಹಲಿ (PTI): 32 ವಾರಗಳ ಗರ್ಭಿಣಿಗೆ ವೈದ್ಯಕೀಯ ಗರ್ಭಪಾತದ ಮೂಲಕ ಭ್ರೂಣವನ್ನು ತೆಗೆಸಲು ಸುಪ್ರೀಂ ಕೋರ್ಟ್ ಬುಧವಾರ ಅವಕಾಶ ನಿರಾಕರಿಸಿದೆ. ಈ ಮಹಿಳೆಯು ಕಳೆದ ಅಕ್ಟೋಬರ್‌ನಲ್ಲಿ ತನ್ನ ಪತಿಯನ್ನು ಕಳೆದುಕೊಂಡಿದ್ದಾರೆ. ಭ್ರೂಣದಲ್ಲಿ ಅಸಹಜವಾಗಿರುವುದು ಏನೂ ಕಂಡುಬಂದಿಲ್ಲ ಎಂದು ವೈದ್ಯಕೀಯ ಮಂಡಳಿ ತಿಳಿಸಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಮಹಿಳೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಬೇಲಾ ಎಂ. ತ್ರಿವೇದಿ ಮತ್ತು ಪ್ರಸನ್ನ ಬಾಲಚಂದ್ರ ವರಾಳೆ ಅವರು ಇದ್ದ ವಿಭಾಗೀಯ ಪೀಠವು, ದೆಹಲಿ ಹೈಕೋರ್ಟ್ ಜನವರಿ 23ರಂದು ನೀಡಿದ ಆದೇಶದಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿತು.
'ಭ್ರೂಣಕ್ಕೆ 32 ವಾರಗಳಾಗಿವೆ. ಇದನ್ನು ತೆಗೆಸುವುದು ಹೇಗೆ ಸಾಧ್ಯ? ಇದು ಸಾಧ್ಯವಿಲ್ಲ ಎಂದು ವೈದ್ಯಕೀಯ ಮಂಡಳಿ ಕೂಡ ಹೇಳಿದೆ. ಇನ್ನು ಎರಡು ವಾರಗಳಷ್ಟೇ. ನಂತರ ನೀವು ಬಯಸಿದರೆ ಶಿಶುವನ್ನು ದತ್ತು ನೀಡಬಹುದು' ಎಂದು ವಿಭಾಗೀಯ ಪೀಠ ಹೇಳಿತು.
ಮಹಿಳೆಯ ಪರವಾಗಿ ವಾದಿಸಿದ ವಕೀಲ ಅಮಿತ್ ಮಿಶ್ರಾ, 'ಮಗುವಿಗೆ ಜನ್ಮ ನೀಡುವುದು ಆಕೆಯ ಇಚ್ಛೆಗೆ ವಿರುದ್ಧವಾದುದು, ಆಕೆ ಜೀವನಪೂರ್ತಿ ಮಾನಸಿಕ ಆಘಾತ ಅನುಭವಿಸಬೇಕಾಗುತ್ತದೆ' ಎಂದು ಹೇಳಿದರು. 'ನಾವು ವೈದ್ಯಕೀಯ ಮಂಡಳಿಯ ಅಭಿಪ್ರಾಯವನ್ನು ಮೀರಲು ಸಾಧ್ಯವಿಲ್ಲ. ಭ್ರೂಣವು ಸಹಜವಾಗಿದೆ ಎಂದು ಮಂಡಳಿ ಹೇಳಿದೆ' ಎಂದು ನ್ಯಾಯಮೂರ್ತಿ ತ್ರಿವೇದಿ ಹೇಳಿದರು.
ಅಲ್ಲದೆ, ಗರ್ಭಿಣಿ ಮಹಿಳೆಗೆ ಕೂಡ ಯಾವುದೇ ಅಪಾಯ ಇಲ್ಲ ಎಂದು ಮಂಡಳಿ ಅಭಿಪ್ರಾಯ ನೀಡಿದೆ ಎಂದರು. 'ಮಹಿಳೆಯು ವಿಧವೆ, ಆಕೆ ಜೀವಪರ್ಯಂತ ಆಘಾತದಲ್ಲಿ ಇರಬೇಕಾಗುತ್ತದೆ, ಆಕೆಯ ಹಿತಾಸಕ್ತಿಯನ್ನು ಕೂಡ ಕೋರ್ಟ್ ಪರಿಗಣಿಸಬೇಕು' ಎಂದು ಮಿಶ್ರಾ ವಾದಿಸಿದರು.
'ಆಕೆಯ ಹಿತಾಸಕ್ತಿಯನ್ನಷ್ಟೇ ನಾವು ಏಕೆ ಪರಿಗಣಿಸಬೇಕು' ಎಂದು ತ್ರಿವೇದಿ ಪ್ರಶ್ನಿಸಿದರು. ನಂತರ ಪೀಠವು ಅರ್ಜಿಯನ್ನು ವಜಾಗೊಳಿಸಿತು.
ದೆಹಲಿ ಹೈಕೋರ್ಟ್ ಈ ಮಹಿಳೆಗೆ 29 ವಾರಗಳ ಭ್ರೂಣವನ್ನು ವೈದ್ಯಕೀಯ ಗರ್ಭಪಾತದ ಮೂಲಕ ತೆಗೆಸಿಕೊಳ್ಳಲು ಜನವರಿ 4ರಂದು ಅನುಮತಿ ನೀಡಿತ್ತು. ಜನ್ಮ ನೀಡುವ ಹಕ್ಕಿನ ಭಾಗವಾಗಿ ಜನ್ಮ ನೀಡದೆ ಇರುವ ಹಕ್ಕೂ ಇರುತ್ತದೆ ಎಂದು ಕೋರ್ಟ್ ಹೇಳಿತ್ತು.
ಶಿಶು ಬದುಕುಳಿಯುವ ಸಾಧ್ಯತೆಯು ತೃಪ್ತಿಕರ ಮಟ್ಟದಲ್ಲಿಯೇ ಇದೆ ಎಂದು ಕೇಂದ್ರ ಸರ್ಕಾರವು ಕೋರ್ಟ್‌ಗೆ ತಿಳಿಸಿತ್ತು. ಇನ್ನೂ ಜನಿಸಿರದ ಭ್ರೂಣದ ಬದುಕುವ ಹಕ್ಕನ್ನು ಕೂಡ ಕೋರ್ಟ್ ಪರಿಗಣಿಸಬೇಕು. ಈ ಮಹಿಳೆಗೆ ವೈದ್ಯಕೀಯ ಗರ್ಭಪಾತಕ್ಕೆ ನೀಡಿದ್ದ ಅವಕಾಶವನ್ನು ಹಿಂಪಡೆಯಬೇಕು ಎಂದು ಕೇಂದ್ರ ಸರ್ಕಾರವು ಮನವಿ ಮಾಡಿತ್ತು.
ನಂತರ ಈ ಆದೇಶವನ್ನು ವಾಪಸ್ ಪಡೆದ ಹೈಕೋರ್ಟ್, ಆಗ 32 ವಾರಗಳ ಗರ್ಭಿಣಿಯಾಗಿದ್ದ ಆ ಮಹಿಳೆಯು ಪ್ರಸವಕ್ಕೆ ಕೇಂದ್ರ ಅಥವಾ ರಾಜ್ಯ ಸರ್ಕಾರ ನಡೆಸುವ ಯಾವುದೇ ಆಸ್ಪತ್ರೆಗೆ ದಾಖಲಾಗಬಹುದು ಎಂದು ಹೇಳಿತ್ತು. ಶಿಶು ಜನಿಸಿದ ನಂತರದಲ್ಲಿ, ಅದನ್ನು ದತ್ತು ಕೊಡಲು ಮಹಿಳೆ ಮನಸ್ಸು ಮಾಡಿದರೆ, ಅದಕ್ಕೆ ಸಂಬಂಧಿಸಿದ ಪ್ರಕ್ರಿಯೆಗಳು ಸುಲಲಿತವಾಗಿ ನಡೆಯುವಂತೆ ಕೇಂದ್ರ ಸರ್ಕಾರ ನೋಡಿಕೊಳ್ಳಬೇಕು ಎಂದು ಸೂಚಿಸಿತ್ತು.