ರಾಂಚಿ: ಜಾರ್ಖಂಡ್ ಮುಖ್ಯಮಂತ್ರಿ ಚಂಪೈ ಸೊರೇನ್ ಅವರು ವಿಶ್ವಾಸಮತ ಸಾಬೀತುಪಡಿಸಿದ್ದಾರೆ.
81 ಸದಸ್ಯ ಬಲದ ವಿಧಾನಸಭೆಯಲ್ಲಿ ವಿಶ್ವಾಸಮತದ ಪರವಾಗಿ 47 ಮತಗಳು ಬಿದ್ದರೆ, ವಿರುದ್ಧವಾಗಿ 29 ಶಾಸಕರು ಮತ ಚಲಾಯಿಸಿದ್ದಾರೆ. ಪಕ್ಷೇತರ ಶಾಸಕರಾದ ಸರಯೂ ರಾಯ್ ಮತದಾನದಿಂದ ದೂರ ಉಳಿದಿದ್ದರು.
ಆಡಳಿತಾರೂಢ ಮೈತ್ರಿಕೂಟದಲ್ಲಿ ಜೆಎಂಎಂ, ಕಾಂಗ್ರೆಸ್ ಮತ್ತು ಆರ್‌ಜೆಡಿ ಪಕ್ಷಗಳಿವೆ. ಸಿಪಿಐಎಂಎಲ್(ಎಲ್) ಪಕ್ಷದ ಏಕೈಕ ಶಾಸಕರು ಬಾಹ್ಯ ಬೆಂಬಲ ನೀಡಿದ್ದಾರೆ. ವಿರೋಧ ಪಕ್ಷ ಬಿಜೆಪಿಯ 26, ಎಜೆಎಸ್‌ಯು ಪಕ್ಷದ ಮೂವರು ಶಾಸಕರಿದ್ದಾರೆ.
ಭೂ ಹಗರಣಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರನ್ನು ಜಾರಿ ನಿರ್ದೇಶನಾಲಯದ(ಇ.ಡಿ) ಅಧಿಕಾರಿಗಳು ಬಂಧಿಸಿದ ಬಳಿಕ ಫೆಬ್ರುವರಿ 2ರಂದು ಜಾರ್ಖಂಡ್ ಸಿಎಂ ಆಗಿ ಚಂಪೈ ಸೊರೇನ್ ಪ್ರಮಾಣವಚನ ಸ್ವೀಕರಿಸಿದ್ದರು.