ಛಿಂದ್ವಾರಾ: ಬಿಜೆಪಿ ಸೇರುವ ವದಂತಿಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌ನ ಹಿರಿಯ ನಾಯಕ ಕಮಲ್ ನಾಥ್, 'ರಾಜಕೀಯ ನಾಯಕರು ಯಾವುದೇ ಪಕ್ಷ ಸೇರಲು ಮುಕ್ತರು. ಅವರಿಗೆ ಯಾವುದೇ ನಿರ್ಬಂಧವಿಲ್ಲ' ಎಂದಿದ್ದಾರೆ.
ಆಚಾರ್ಯ ಪ್ರಮೋದ್ ಕೃಷ್ಣಂ ಅವರು ಬಿಜೆಪಿ ಸೇರುತ್ತಾರೆ ಎಂಬ ವದಂತಿ ದಟ್ಟವಾಗಿದ್ದು, ಈ ಕುರಿತು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಕಮಲ್ ನಾಥ್, 'ಇಂತಹ ವದಂತಿಗಳು ನನ್ನ ಸುತ್ತಲೂ ಹರಡಿವೆ.
ನಾನು ಬೇರೆ ಯಾವುದೇ ಪಕ್ಷಕ್ಕೆ ಸೇರುವುದಿಲ್ಲ. ಆದರೆ ಯಾವುದೇ ಪಕ್ಷವನ್ನು ಸೇರಲು ರಾಜಕೀಯ ನಾಯಕರು ಮುಕ್ತರು' ಎಂದು ದ್ವಂದ್ವ ಹೇಳಿಕೆ ನೀಡಿದ್ದಾರೆ.
ಲೋಕಸಭೆಯಲ್ಲಿ ಸ್ಪರ್ಧಿಸುತ್ತಿರಾ ಎಂಬ ಪ್ರಶ್ನೆಗೆ, 'ಅಭ್ಯರ್ಥಿಗಳ ಆಯ್ಕೆ ವಿಚಾರ ಹೈಕಮಾಂಡ್‌ಗೆ ಬಿಟ್ಟದ್ದು. ಗೆಲುವಿನ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ' ಎಂದು ಹೇಳಿದರು.
ಗುರುವಾರ(ಫೆ.1) ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದ ಪ್ರಮೋದ ಕೃಷ್ಣಂ, ಉತ್ತರ ಪ್ರದೇಶದ ಶ್ರೀ ಕಲ್ಕಿ ಧಾಮ ಶಂಕುಸ್ಥಾಪನಾ ಸಮಾರಂಭಕ್ಕೆ ಮೋದಿ ಅವರನ್ನು ಆಹ್ವಾನಿಸಿದ್ದರು. ಈ ಭೇಟಿ ಪ್ರಮೋದ ಕೃಷ್ಣಂ ಬಿಜೆಪಿ ಸೇರುತ್ತಾರೆ ಎಂಬ ವದಂತಿಗೆ ಪುಷ್ಟಿ ನೀಡಿತ್ತು.