ಬದಿಯಡ್ಕ: ಕಿಳಿಂಗಾರು ದೀನಬಂಧು ಸಾಯಿರಾಂ ಗೋಪಾಲಕೃಷ್ಣ ಭಟ್ ಅವರ ಪ್ರಥಮಪುಣ್ಯ ತಿಥಿಯ ಸಂದರ್ಭದಲ್ಲಿ ಮಂಗಳವಾರ, ಅವರ ಪುತ್ರ ಕೊಡುಗೈ ದಾನಿ ಸಾಯಿರಾಂ ಕೃಷ್ಣ ಭಟ್ ಅವರು ಬಡಜನತೆಗೆ ನೆರವಾಗುವ ನಿಟ್ಟಿನಲ್ಲಿ ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಿಸಿದರು. ಈ ಸಂದಭರ್Àದಲ್ಲಿ ಅವರು ಮಾತನಾಡಿ, ಮಹಿಳೆಯರು ಸ್ವಾವಲಂಬಿಯಾಗಿ ಜೀವನವನ್ನು ನಡೆಸಲು ಮುಂದಾದರೆ ಆ ಕುಟುಂಬವು ಬೆಳಗಬಲ್ಲದು. ಮಕ್ಕಳ ವಿದ್ಯಾಭ್ಯಾಸ, ದೈನಂದಿನ ವೆಚ್ಚಗಳನ್ನು ಸರಿದೂಗಿಸಲು ಮನೆಯ ಯಜಮಾನನೊಂದಿಗೆ ಸಹಕರಿಸಿದಾಗ ಆರ್ಥಿಕ ಹೊರೆಯನ್ನು ತಗ್ಗಿಸಲು ಸಾಧ್ಯವಿದೆ ಎಂದರು.
ಹಿರಿಯ ವೈದಿಕ ವಿದ್ವಾಂಸ ವೇದಮೂರ್ತಿ ಕಿಳಿಂಗಾರು ನಡುಮನೆ ಗೋಪಾಲಕೃಷ್ಣ ಭಟ್ ಹೊಲಿಗೆಯಂತ್ರದ ಚೆಕ್ ವಿತರಿಸಿದರು. ಫಲಾನುಭವಿಗಳಾದ ಕಿಳಿಂಗಾರು ಬಾಲಗಿರಿಯ ಅನುಶ್ರೀ, ಸುಪ್ರಿಯಾ, ಚಿತ್ರಾವತಿ ಬೇಳ, ಮಂಜುಶ್ರೀ ದರ್ಭೆತ್ತಡ್ಕ, ಅಮಿಶಾ ಶಿರಿಬಾಗಿಲು ಈ ನಾಲ್ಕು ಮಂದಿಗೆ ಹೊಲಿಗೆ ಯಂತ್ರದ ಚೆಕ್ ವಿತರಿಸಲಾಯಿತು. ಇದೇ ವೇಳೆ ಕುಕ್ಕ ಅಲಿಯಾಸ್ ಕುಟ್ಯಾನ ಮುಂಡಕಾನ ಇವರಿಗೆ ಐದುಸಾವಿರ ರೂ. ಚಿಕಿತ್ಸಾ ನೆರವು ಹಾಗೂ ಅಳಿಕೆ ವಿದ್ಯಾಸಂಸ್ಥೆಗಳಿಗೆ ಐದುಸಾವಿರ ರೂ. ಧನಸಹಾಯ ನೀಡಲಾಯಿತು. ನಿವೃತ್ತ ಅಧ್ಯಾಪಕ ಸುಬ್ರಾಯ ಭಟ್, ಗ್ರಾಮಪಂಚಾಯಿತಿ ಸದಸ್ಯ ಶಂಕರ ಡಿ., ವಿಷ್ಣು ಭಟ್, ಉದನೇಶ್ವರ ಭಟ್, ಸತ್ಯನಾರಾಯಣ ಭಟ್ ಗೋಳಿತ್ತಡ್ಕ, ಗೋವಿಂದ ಭಟ್, ಶಾರದಾ ಸಾಯಿರಾಂ ಭಟ್, ಸಂದೇಶ ವಾರಣಾಸಿ ಮೊದಲಾದವರು ಜೊತೆಗಿದ್ದರು.
ಅಭಿಮತ :
ಮಹಿಳೆಯರು ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳಲು ಅನುಕೂಲವಾಗುವಂತೆ ಹೊಲಿಗೆ ಯಂತ್ರವನ್ನು ವಿತರಿಸುತ್ತಿದ್ದೇವೆ. ಬಡಜನರಿಗೆ ಸದಾ ನೆರವಾಗುತ್ತಿದ್ದ ತಂದೆಯವರ ಪುಣ್ಯತಿಥಿಯಂದು ಈ ಕಾರ್ಯವನ್ನು ಮಾಡುತ್ತಿರುವುದು ಮನಸ್ಸಿಗೆ ಆನಂದವನ್ನು ನೀಡಿದೆ.
- ಸಾಯಿರಾಂ ಕೆ.ಎನ್.ಕೃಷ್ಣ ಭಟ್