ನವದೆಹಲಿ: ಬಿಜೆಪಿಯ ಹಿರಿಯ ನಾಯಕ, ಮಾಜಿ ಉಪ ಪ್ರಧಾನಿ ಎಲ್.ಕೆ.ಅಡ್ವಾಣಿ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಗೌರವ 'ಭಾರತ ರತ್ನ' ಘೋಷಣೆಯಾಗಿರುವ ಬೆನ್ನಲ್ಲೆ ಅಡ್ವಾಣಿ ಅವರ ದೆಹಲಿ ಮನೆಯಲ್ಲಿ ಸಂಭ್ರಮ ಕಂಡು ಬಂತು.
ಆ ನಂತರ ಮನೆಯ ಹೊರಗೆ ಸುದ್ದಿಸಂಸ್ಥೆ ಎಎನ್‌ಐ ಜೊತೆ ಮಾತನಾಡಿದ ಪ್ರತಿಭಾ ಅಡ್ವಾಣಿ ಅವರು, 'ಅವರ ಮನಸ್ಸು ಪ್ರಪುಲ್ಲಗೊಂಡಿದೆ. ಅವರು ಹೆಚ್ಚೇನು ಮಾತನಾಡಿಲ್ಲ. ಭಾರತರತ್ನ ಘೋಷಣೆ ತಿಳಿದು ಆನಂದಭಾಷ್ಪ ಸುರಿಸಿದರು. ತಮ್ಮ ಇಡೀ ಜೀವನವನ್ನೇ ರಾಷ್ಟ್ರಸೇವೆಗೆ ಮುಡಿಪಾಗಿಟ್ಟಿದ್ದ ಅವರಿಗೆ ಸೂಕ್ತ ಗೌರವ ಸಿಕ್ಕಿದೆ. ಅವರು ಇಡೀ ದೇಶಕ್ಕೆ ಧನ್ಯವಾದಗಳನ್ನು ಸಮರ್ಪಿಸಿದ್ದಾರೆ' ಎಂದು ಹೇಳಿದರು.
ತಮ್ಮ ಎಕ್ಸ್ ಖಾತೆಯಲ್ಲಿ ಪ್ರಧಾನಿ ಅವರು ಶನಿವಾರ ಅಡ್ವಾಣಿ ಅವರಿಗೆ ಭಾರತ ರತ್ನ ಘೋಷಣೆ ಮಾಡಿ ಅವರನ್ನು ಅಭಿನಂದಿಸಿದ್ದಾರೆ.
'ಎಲ್.ಕೆ.ಅಡ್ವಾಣಿ ಅವರಿಗೆ ಭಾರತ ರತ್ನ ಪ್ರದಾನ ಮಾಡಲಾಗುವುದು ಎಂಬ ವಿಚಾರ ಹಂಚಿಕೊಳ್ಳಲು ಸಂತಸವಾಗುತ್ತಿದೆ. ಈ ಗೌರವಕ್ಕೆ ಪಾತ್ರರಾಗುತ್ತಿರುವ ಕುರಿತು ಅವರೊಂದಿಗೆ ಮಾತನಾಡಿ, ಅಭಿನಂದಿಸಿದ್ದೇನೆ' ಎಂದು ಟ್ವೀಟ್ ಮಾಡಿದ್ದರು.
ಅಡ್ವಾಣಿ ಅವರಿಗೆ ಪುಷ್ಪಗುಚ್ಛ ನೀಡುತ್ತಿರುವ ಚಿತ್ರವನ್ನು ಹಂಚಿಕೊಂಡಿರುವ ಪ್ರಧಾನಿ, 'ನಮ್ಮ ಕಾಲದ ಅತ್ಯಂತ ಆದರಣೀಯ ಆಡಳಿತಗಾರಲ್ಲಿ ಒಬ್ಬರಾದ ಅಡ್ವಾಣಿ ಅವರು, ಭಾರತದ ಅಭಿವೃದ್ಧಿಗೆ ನೀಡಿದ ಕೊಡುಗೆ ಚಿರಸ್ಥಾಯಿಯಾದದ್ದು' ಎಂದು ಶ್ಲಾಘಿಸಿದ್ದಾರೆ.
'ದೇಶದ ಗೃಹ ಸಚಿವರಾಗಿ, ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಮಂತ್ರಿಯಾಗಿ ಪ್ರಸಿದ್ಧಿ ಪಡೆದವರು. ಅವರ ಸಂಸದೀಯ ಪಾಲ್ಗೊಳ್ಳುವಿಕೆಯು ಆದರ್ಶಪ್ರಾಯವಾದದ್ದು' ಎಂದು ಬರೆದುಕೊಂಡಿದ್ದಾರೆ.