ಮಾಲ್ಡಾ: ಹಠಾತ್ ಬ್ರೇಕ್ ಹಾಕಿದ ಪರಿಣಾಮ ರಾಹುಲ್ ಗಾಂಧಿ ಅವರ ಕಾರಿನ ಹಿಂಬದಿ ಗಾಜು ಒಡೆದು ಹೋಗಿದೆ ಎಂದು ಕಾಂಗ್ರೆಸ್ ತಿಳಿಸಿದೆ. ಇದಕ್ಕೂ ಮೊದಲು ಕಿಡಿಗೇಡಿಗಳು ಕಾರಿನ ಮೇಲೆ ಕಲ್ಲು ತೂರಾಟ ನಡೆಸಿದ್ದರು ಎಂದು ಪಕ್ಷದ ಹಿರಿಯ ನಾಯಕ ಅಧೀರ್ ರಂಜನ್ ಚೌಧರಿ ಆರೋಪಿಸಿದ್ದರು.
ಈ ಬಗ್ಗೆ ಎಕ್ಸ್‌ನಲ್ಲಿ ಸ್ಪಷ್ಟನೆ ನೀಡಿರುವ ಕಾಂಗ್ರೆಸ್, 'ಭಾರತ್ ಜೋಡೊ ನ್ಯಾಯ ಯಾತ್ರೆ ಭಾಗವಾಗಿ ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಗೆ ರಾಹುಲ್ ಗಾಂಧಿ ತೆರಳಿದ್ದು, ರಾಹುಲ್ ಅವರನ್ನು ಭೇಟಿ ಮಾಡಲು ಜನಸಮೂಹವೇ ಸೇರಿತ್ತು. ಈ ವೇಳೆ ಮಹಿಳೆಯೊಬ್ಬರು ಕಾರಿನ ಮುಂಭಾಗಕ್ಕೆ ಬಂದಿದ್ದು, ಹಠಾತ್ ಬ್ರೇಕ್ ಹಾಕಬೇಕಾಯಿತು. ಭದ್ರತಾ ವೃತ್ತದೊಳಗೆ ಹಗ್ಗ ಬಳಸಿದ್ದರ ಪರಿಣಾಮ ಕಾರಿನ ಗಾಜು ಒಡೆದಿದೆ' ಎಂದು ತಿಳಿಸಿದೆ.
'ಜನ ನಾಯಕ ರಾಹುಲ್ ಗಾಂಧಿ ಜನರಿಗಾಗುತ್ತಿರುವ ಅನ್ಯಾಯದ ವಿರುದ್ಧ ಹೋರಾಡುತ್ತಿದ್ದಾರೆ. ಅವರಿಗೆ ಜನರ ಸಂಪೂರ್ಣ ಬೆಂಬಲವಿದೆ' ಎಂದಿದೆ.
ಏನತ್ಮಧ್ಯೆ, ಈ ಘಟನೆಯು ಪಶ್ಚಿಮ ಬಂಗಾಳದಲ್ಲಲ್ಲ, ನೆರೆಯ ಬಿಹಾರದ ಕತಿಹಾರ್ ಪ್ರದೇಶದಲ್ಲಿ ನಡೆದಿದೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.