ಗುವಾಹಟಿ : ಯಾವುದೇ ದೇಶವು ತನ್ನ ಗತವನ್ನು(ಇತಿಹಾಸ) ಅಳಿಸಿ ಹಾಕುವ ಮೂಲಕ ಪ್ರಗತಿ ಸಾಧಿಸಲು ಸಾಧ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹೇಳಿದ್ದಾರೆ.
ಅಸ್ಸಾಂನಲ್ಲಿ ಸುಮಾರು ₹11,600 ಕೋಟಿ ಮೊತ್ತದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದ ಬಳಿಕ ಅವರು ಮಾತನಾಡಿದರು.
ಸ್ವಾತಂತ್ರ್ಯ ಭಾರತದ ನಂತರ ಅಧಿಕಾರಕ್ಕೆ ಬಂದವರು ದೇಶದಲ್ಲಿನ ಧಾರ್ಮಿಕ ಸ್ಥಳಗಳ ಮಹತ್ವವನ್ನು ಅರ್ಥಮಾಡಿಕೊಳ್ಳಲು ವಿಫಲರಾದರು ಹಾಗೂ ರಾಜಕೀಯ ಕಾರಣಗಳಿಂದಾಗಿ ತಮ್ಮದೇ ಸಂಸ್ಕೃತಿಯ ಬಗ್ಗೆ ನಾಚಿಕೆ ಪಡುವ ಮನೋಭಾವನೆ ಬೆಳಸಿಕೊಂಡಿದ್ದರು ಎಂದು ಪ್ರಧಾನಿ ನರೇಂದ್ರ ಮೋದಿ ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಆದರೆ ಕಳೆದ ಹತ್ತು ವರ್ಷಗಳಲ್ಲಿ ದೇಶದ ಪರಿಸ್ಥಿತಿ ಬದಲಾಗಿದೆ ಎಂದರು.
ಅಸ್ಸಾಂನಲ್ಲಿ ಚಾಲನೆ ನೀಡಿದ ವಿವಿಧ ಅಭಿವೃದ್ಧಿ ಯೋಜನೆಗಳು ಈಶಾನ್ಯ ಭಾಗದಲ್ಲದೇ, ದಕ್ಷಿಣ ಏಷ್ಯಾದ ಇತರೆ ಭಾಗಗಳಿಗೂ ಸಂಪರ್ಕ ಸಾಧಿಸುತ್ತದೆ. ಈ ಮೂಲಕ ಆರ್ಥಿಕತೆ ಬಲಪಡಿಸಲು ಸಹಕಾರಿಯಾಗಲಿದೆ ಎಂದು ಹೇಳಿದ್ದಾರೆ.
ಕಳೆದ 10 ವರ್ಷಗಳಲ್ಲಿ ಅಸ್ಸಾಂನಲ್ಲಿ ಶಾಂತಿ ನೆಲೆಸಿದೆ. 7,000ಕ್ಕೂ ಹೆಚ್ಚು ಜನರು ಶಸ್ತ್ರಾಸ್ತ್ರಗಳನ್ನು ತ್ಯಜಿಸಿ, ಸಮಾಜದ ಮುಖ್ಯವಾಹಿನಿಗೆ ಮರಳಿದ್ದಾರೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ
ಅಸ್ಸಾಂ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ. ಕಳೆದ ದಶಕದಲ್ಲಿ ದಾಖಲೆ ಮಟ್ಟದಲ್ಲಿ ಪ್ರವಾಸಿಗರು ರಾಜ್ಯಕ್ಕೆ ಭೇಟಿ ನೀಡಿದ್ದಾರೆ ಎಂದು ತಿಳಿಸಿದ್ದಾರೆ
.