ಕಾಸರಗೋಡು: ಮುದ್ರಣ ಕ್ಷೇತ್ರದ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೇರಳ ಪ್ರಿಂಟರ್ಸ್ ಅಸೋಸಿಯೇಶನ್ (ಕೆಪಿಎ) ನೇತೃತ್ವದಲ್ಲಿ ರಾಜ್ಯಾದ್ಯಂತ ಕೈಗೊಂಡ ಮುಷ್ಕರ ಅನ್ವಯ ಕೆ.ಪಿ.ಎ ಕಾಸರಗೋಡು ಜಿಲ್ಲಾ ಸಮಿತಿ ನೇತೃತ್ವದಲ್ಲಿ ಬುಧವಾರ ಪ್ರತಿಭಟನೆ ನಡೆಯಿತು.
ಧರಣಿ ಪೂರ್ವಭಾವಿಯಾಗಿ ಪಿಲಿಕುಂಜೆ ನಗರಸಭಾಂಗಣ ವಠಾರದಿಂದ ಆರಂಭಗೊಪಂಡ ಪ್ರತಿಭಟನಾ ಮೆರವಣಿಗೆ ಹಳೇ ಬಸ್ ನಿಲ್ದಾಣ ಮೂಲಕ ಮುಖ್ಯ ಅಂಚೆ ಕಚೇರಿ ಬಳಿ ಸಾಗಿತು. ನಂತರ ನಗರಸಭಾಂಗಣ ವಠಾರದಲ್ಲಿ ನಡೆದ ಧರಣಿಯನ್ನು ಕಾಸರಗೋಡು ನಗರಸಭಾ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಅಬ್ಬಾಸ್ ಬೀಗಂ ಉದ್ಘಾಟಿಸಿದರು. ಕೆಪಿಎ ರಾಜ್ಯ ಸಮಿತಿ ಉಪಾಧ್ಯಕ್ಷ ಮುಜೀಬ್ ಅಹಮ್ಮದ್ ವಿಷಯ ಮಂಡಿಸಿದರು. ಜಿಲ್ಲಾಧ್ಯಕ್ಷ ಟಿ.ಪಿ.ಅಶೋಕ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು.
ದೇಶಾದ್ಯಂತ ಮುದ್ರಣ ಉದ್ಯಮವು ಬಲು ದೊಡ್ಡ ಬಿಕ್ಕಟ್ಟು ಎದುರಿಸುತ್ತಿದೆ. 2005ರಲ್ಲಿ ತೆರಿಗೆ ಮುಕ್ತ ಮುದ್ರಣ ವಲಯದ ಬದಲು ವ್ಯಾಟ್ ಜಾರಿಗೊಳಿಸಿದಾಗ ಶೇ.5ರಷ್ಟು ತೆರಿಗೆ ವಿಧಿಸಲಾಗಿತ್ತು. 2017 ರಲ್ಲಿ ಜಿ.ಎಸ್.ಟಿ ಬಂದಾಗ, ಹೆಚ್ಚಿನ ಮುದ್ರಿತ ಉತ್ಪನ್ನಗಳ ಮೇಲಿನ ತೆರಿಗೆ ದರವು 5 ಶೇಕಡಾದಿಂದ 12 ಶೇಕಡಾ ಹೆಚ್ಚಳವುಂಟಾಗಿದೆ. 2021 ರಿಂದ ಜಿಎಸ್‍ಟಿ ದರ 18 ಶೇಕಡಾ ಹೆಚ್ಚಳಗೊಂಡಿದ್ದು, ಮುದ್ರಣ ಉದ್ಯಮ ಮತ್ತು ಗ್ರಾಹಕರನ್ನು ತೀವ್ರ ಸಂಕಷ್ಟಕ್ಕೆ ಸಿಲುಕಿಸಿದೆ. ಮುಖ್ಯ ಕಚ್ಚಾವಸ್ತುವಾಗಿರುವ ನ್ಯೂಸ್‍ಪ್ರಿಂಟ್ ಮೇಲಿನ ಜಿಎಸ್‍ಟಿ ತೆರಿಗೆ ದರ ಶೇ. 18ರಿಂದ 12ಕ್ಕೆ ಕಡಿತಗೊಳಿಸಬೇಕು ಎಂಬುದು ಪ್ರಮುಖ ಅವಶ್ಯಕತೆಯಾಗಿದೆ. ಇಂಧನ ಬೆಲೆ, ವಿದ್ಯುತ್ ದರ ಹೆಚ್ಚಳ ಮತ್ತು ಇತರ ಸಾಮಾನ್ಯ ವೆಚ್ಚಗಳು ಹೆಚ್ಚಳಗೊಂಡಿರುವುದರಿಂದ ಮುದ್ರಣ ಕ್ಷೇತ್ರದ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರಿದೆ ಎಂದು ಪ್ರತಿಭಟನಾಕಾರರು ತಿಳಿಸಿದರು.
ಸಿಪಿಎಂ ಕಾಸರಗೋಡು ಏರಿಯಾ ಕಾರ್ಯದರ್ಶಿ ಕೆ.ಎ.ಮಹಮ್ಮದ್ ಹನೀಫ, ನಗರಸಭಾ ಸದಸ್ಯ ವರಪ್ರಸಾದ್, ಕೆ.ವಿ.ವಿ.ಇ.ಎಸ್ ಜಿಲ್ಲಾ ಕೋಶಾಧಿಕಾರಿ ಮಾಹಿನ್ ಕೋಳಿಕ್ಕರ, ಕ.ವಿ.ವಿ. ಎಸ್ ಜಿಲ್ಲಾಧ್ಯಕ್ಷೆ ಶೋಭಾ ಬಾಲನ್ ಮಾಣಿಯಾಟ್, ಸಿ.ಬಿ.ಕೊಡಿಯಂಕುನ್ನಿಲ್, ರಾಜಾರಾಮ ಎಸ್. ಪೆರ್ಲ, ಸುಧೀಶ್, ಜಿತು ಪನ್ಯಾಲ್, ಸಿರಾಜುದ್ದೀನ್ ಮುಜಾಹಿದ್ ಉಪಸ್ಥಿತರಿದ್ದರು.
ಜಿಲ್ಲಾ ಕಾರ್ಯದರ್ಶಿ ರೆಜಿ ಮ್ಯಾಥ್ಯೂ ಸ್ವಾಗತಿಸಿದರು. ಜಿಲ್ಲಾ ಖಜಾಂಚಿ ಮೊಯಿನುದ್ದೀನ್ ವಂದಿಸಿದರು.