ನವದೆಹಲಿ: ಆಮ್ ಆದ್ಮಿ ಪಕ್ಷದ (ಎಎಪಿ) ಶಾಸಕರನ್ನು ಖರೀದಿಸಲು ಭಾರತೀಯ ಜನತಾ ಪಕ್ಷ (ಬಿಜೆಪಿ) ಯತ್ನಿಸುತ್ತಿದೆ ಎಂಬ ಆರೋಪದ ತನಿಖೆಗೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ನಿವಾಸಕ್ಕೆ ದೆಹಲಿ ಪೊಲೀಸ್ ಅಪರಾಧ ದಳ ಶನಿವಾರ ಬೆಳಿಗ್ಗೆ ನೋಟಿಸ್ ನೀಡಲು ತೆರಳಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಉತ್ತರ ದೆಹಲಿಯ ಸಿವಿಲ್ ಲೈನ್ಸ್ ಪ್ರದೇಶದಲ್ಲಿರುವ ಮುಖ್ಯಂತ್ರಿಯವರ ಅಧಿಕೃತ ನಿವಾಸಕ್ಕೆ ದೆಹಲಿ ಪೊಲೀಸ್ ಸಹಾಯಕ ಆಯುಕ್ತ (ಎಸಿಪಿ) ದರ್ಜೆಯ ಅಧಿಕಾರಿಯ ನೇತೃತ್ವದ ತಂಡವು ತೆರಳಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ದೆಹಲಿ ಪೊಲೀಸ್ ಅಪರಾಧ ದಳ, ಶುಕ್ರವಾರ ಸಂಜೆಯೂ ಕೇಜ್ರಿವಾಲ್ ನಿವಾಸಕ್ಕೆ ಭೇಟಿ ಕೊಟ್ಟಿತ್ತು. ಆದರೆ ಕೇಜ್ರಿವಾಲ್ ನಿವಾಸದ ಅಧಿಕಾರಿಗಳು ಅದನ್ನು ಸ್ವೀಕರಿಸಲು ನಿರಾಕರಿಸಿದ್ದರಿಂದ ನೋಟಿಸ್ ನೀಡಲು ಸಾಧ್ಯವಾಗಲಿಲ್ಲ ಎಂದು ಮೂಲಗಳು ತಿಳಿಸಿವೆ.
ಮತ್ತೊಂದೆಡೆ ದೆಹಲಿ ಸಚಿವೆ ಆತಿಶಿ ನಿವಾಸಕ್ಕೂ ಕ್ರೈ ಬ್ರಾಂಚ್ ತಂಡ ಭೇಟಿ ಕೊಟ್ಟಿತ್ತು. ಅವರು ಉಪಸ್ಥಿತರರಿಲ್ಲ ಎಂದು ವರದಿಯಾಗಿದೆ.
ಇ.ಡಿ ವಿಚಾರಣೆ; 5ನೇ ಬಾರಿ ಗೈರು
ಏತನ್ಮಧ್ಯೆ ಹಣ ಅಕ್ರಮ ವರ್ಗಾವಣೆ ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯ (ಇ.ಡಿ) ನಡೆಸುತ್ತಿರುವ ವಿಚಾರಣೆಗೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಐದನೇ ಬಾರಿ ಗೈರಾಗಿದ್ದರು.