HEALTH TIPS

ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬರಿಗೆ ಸರಕಾರಿ ಪ.ಪೂ. ಕಾಲೇಜು ಆರಂಭಕ್ಕೆ ಅನುಮತಿ

 ಮಂಗಳೂರು: ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಅವರ ಬಹುದೊಡ್ಡ ಕನಸೊಂದು ನನಸಾಗಿದೆ. ಕೆಲವು ವರ್ಷದಿಂದ ಅವರು ನಡೆಸುತ್ತಿರುವ ಸತತ ಪ್ರಯತ್ನಕ್ಕೆ ಯಶಸ್ಸು ಸಿಕ್ಕಿವೆ.

ರಾಜ್ಯ ಸರಕಾರದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ (ಪದವಿ ಪೂರ್ವ ಶಿಕ್ಷಣ)ಯ ಅಧೀನ ಕಾರ್ಯದರ್ಶಿ ಪದ್ಮಿನಿ ಎಸ್.ಎನ್.

ಅವರು ಹೊರಡಿಸಿದ ಆದೇಶದಲ್ಲಿ ಹರೇಕಳ ಹಾಜಬ್ಬರ ಸರಕಾರಿ ಪ್ರೌಢಶಾಲೆಯನ್ನು ಉನ್ನತೀಕರಿಸಿ ಹೊಸದಾಗಿ ಸರಕಾರಿ ಪದವಿ ಪೂರ್ವ ಕಾಲೇಜನ್ನು ಪ್ರಾರಂಭಿಸಲು ಸೂಚಿಸಲಾಗಿದೆ.

15 ವರ್ಷದ ಹೋರಾಟದ ಫಲ: ಹರೇಕಳ ಹಾಜಬ್ಬರ ಪದವಿ ಪೂರ್ವ ಕಾಲೇಜು ತೆರೆಯುವ ಕನಸು ಇಂದು ನಿನ್ನೆಯದಲ್ಲ. ಕಳೆದ ಹಲವು ವರ್ಷದಿಂದ ಸಚಿವರು, ಸಂಸದರು, ಶಾಸಕರು, ಅಧಿಕಾರಿಗಳ ಬೆನ್ನ ಹಿಂದೆ ಬಿದ್ದು ಅವರು ನಡೆಸಿದ ಪ್ರಯ ತ್ನದ ಫಲ ಇದಾಗಿದೆ. ತನಗೆ ಪ್ರಶಸ್ತಿ, ಅಭಿನಂದನೆ, ಸನ್ಮಾನ... ಹೀಗೆ ಬೇರೆ ಬೇರೆ ಕಾರ್ಯಕ್ರಮಗಳು ನಡೆದಾಗಲೆಲ್ಲಾ ಹಾಜಬ್ಬರು ಕೇಳಿದ್ದು, ತನಗೊಂದು 'ಪದವಿ ಪೂರ್ವ ಕಾಲೇಜು ಕೊಟ್ಟು ಬಿಡಿ...' ಅಂತ.

'ಕಾಲೇಜಿಗೆ ಕಟ್ಟಡ ಬೇಡ. ಅದು ಮುಂದಿನ ವರ್ಷ ಕೊಡಿ. ಈ ವರ್ಷ ಅನುಮತಿ ಕೊಟ್ಟರೆ ಸಾಕು. ನಾನು ಯಾವುದಾದರೊಂದು ಮೂಲೆಯಲ್ಲಿ ಪದವಿ ಪೂರ್ವ ಕಾಲೇಜು ತರಗತಿ ನಡೆಸಲು ಪ್ರಯತ್ನಿಸುವೆ' ಎಂದು ಹಾಜಬ್ಬರ ಪರಿಪರಿಯ ಮನವಿಗೆ ಕೊನೆಗೂ ರಾಜ್ಯ ಸರಕಾರ ಸ್ಪಂದಿಸಿದೆ.

2009ರ ಎಪ್ರಿಲ್ 21ರಂದು ಪದವಿ ಪೂರ್ವ ಉಪನಿರ್ದೇಶಕರಿಗೆ ಪತ್ರ ಬರೆದು ಸರಕಾರಿ ಪದವಿ ಪೂರ್ವ ಕಾಲೇಜು ತೆರೆ ಯಲು ಹರೇಕಳ ಹಾಜಬ್ಬ ಅನುಮತಿ ಕೋರಿದ್ದರು. ಅಲ್ಲಿಂದ ಆರಂಭಗೊಂಡ ಅವರ ಯಶೋಗಾಥೆಯು ಮುಂದುವರಿಯುತ್ತಲೇ ಇತ್ತು. ಪದ್ಮಶ್ರೀ ಪುರಸ್ಕಾರ ಸ್ವೀಕರಿಸಿದ ಬಳಿಕವೂ ಹಾಜಬ್ಬರು ಕಾಲೇಜು ಆರಂಭಿಸಲು ಅವಕಾಶ ನೀಡಿ ಎಂದು ಭಿನ್ನವಿಸಿಕೊಳ್ಳುತ್ತಿದ್ದರು.


ಹರೇಕಳ ಗ್ರಾಮದ ನ್ಯೂಪಡ್ಪುವಿನ ಮದ್ರಸವೊಂದರಲ್ಲಿ 1999-2000ರಲ್ಲಿ ಹಾಜಬ್ಬರು ಶಾಲೆಯೊಂದನ್ನು ತೆರೆದು ಅದನ್ನು ಉಳಿಸಿ- ಬೆಳೆಸಲು ಪಟ್ಟ ಶ್ರಮ ಅವಿಸ್ಮರಣೀಯ. ಹಾಗಾಗಿ ಇಂದು ಅವರು ದೇಶ-ವಿದೇಶಗಳಲ್ಲಿ ಮನೆ ಮಾತಾಗಿದ್ದಾರೆ. ಆರಂಭದಲ್ಲಿ ಪ್ರಾಥಮಿಕ ಬಳಿಕ ಪ್ರೌಢಶಾಲೆಯ ಒಂದೊಂದೇ ತರಗತಿಯನ್ನು ಏರಿಸಿಕೊಂಡು ಹೋದ ಹಾಜಬ್ಬರು ಇದೀಗ 2024-25ನೆ ಶೈಕ್ಷಣಿಕ ವರ್ಷದಿಂದ ಪದವಿ ಪೂರ್ವ ಕಾಲೇಜು (ಪಿಯುಸಿ) ಆರಂಭಿಸಲು ಸರಕಾರದಿಂದ ಅನುಮತಿ ಪಡೆದಿದ್ದಾರೆ.

*ಪ್ರಶಸ್ತಿಗಳ ಸರಮಾಲೆ

ಹರೇಕಳ ಹಾಜಬ್ಬರಿಗೆ ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಕನ್ನಡ ಪ್ರಭ ವರ್ಷದ ವ್ಯಕ್ತಿ ಪ್ರಶಸ್ತಿ ಲಭಿಸಿದ ಬಳಿಕ ಸಿಎನ್‌ಎನ್-ಐಬಿಎನ್ ರಿಯಲ್ ಹೀರೊ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಚಿತ್ರದುರ್ಗದ ಮುರುಘ ಮಠದ ಪ್ರಶಸ್ತಿ, ಕೊಪ್ಪಳ ಗಸಿದ್ಧೇಶ್ವರ ಮಠದ ಪ್ರಶಸ್ತಿ, ಮೈಸೂರು ರಮಾಬಾಯಿ ಚಾರಿಟೇಬಲ್ ಫೌಂಡೇಶನ್‌ನ ಪ್ರಶಸ್ತಿ, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ಗೌರವ ಪ್ರಶಸ್ತಿ, ತುಳುನಾಡ ತುಡರ್, ಶೇಖ್ ಅಹ್ಮದ್ ಸರ್ ಹಿಂದಿ, ಅಬುಧಾಬಿಯ ಬ್ಯಾರೀಸ್ ವೆಲ್ಫೇರ್ ಅಸೋಸಿಯೇಶನ್‌ನ ದಶಮಾನೋತ್ಸವದ ಪ್ರಶಸ್ತಿ, ಬಹರೈನ್ ಕನ್ನಡ ಸಂಘದ ವಸಂತೋತ್ಸವ, ಆಳ್ವಾಸ್ ಪ್ರಶಸ್ತಿ, ಮೂಲತ್ವ ಪ್ರಶಸ್ತಿ, ಬೆಂಗಳೂರಿನ ಬ್ಯಾರೀಸ್ ವೆಲ್ಫೇರ್ ಅಸೋಸಿಯೇಶನ್, ಡಾ.ಪುಟ್ಟರಾಜ ಗವಾಯಿ ಗುರುವಂದನಾ ಪ್ರಶಸ್ತಿ, ಯೆನೆಪೊಯ ಎಕ್ಸಲೆಂಟ್ ಅವಾರ್ಡ್, ಪದ್ಮಶ್ರೀ ಹೀಗೆ ಹಲವಾರು ಪ್ರಶಸ್ತಿಗಳಲ್ಲದೆ ಅಕ್ಷರ ಸಂತ, ಅಕ್ಕರೆಯ ಅವಧೂತ ಸಹಿತ ಹಲವಾರು ಬಿರುದುಗಳೂ ಲಭಿಸಿವೆ. ಪ್ರಶಸ್ತಿಯ ಜೊತೆಗೆ ದಾನಿಗಳು ನೀಡಿದ ಹಣವನ್ನೆಲ್ಲಾ ಶಾಲೆಯ ಅಭಿವೃದ್ಧಿಗೆ ಬಳಸಿದ್ದು ಹಾಜಬ್ಬರ ಶಿಕ್ಷಣ ಪ್ರೇಮಕ್ಕೆ ಸಾಕ್ಷಿಯಾಗಿತ್ತು. ಹಾಜಬ್ಬರ ಬಗ್ಗೆ ರಾಜ್ಯದ ಹಲವು ವಿವಿಗಳಲ್ಲಿ ಕನ್ನಡ ಮತ್ತು ತುಳು ಅಲ್ಲದೆ ಕೇರಳದ ಕನ್ನಡ ಮಾಧ್ಯಮ ತರಗತಿಗೂ ಪಠ್ಯವಾಗಿದೆ.

ಅಂದಹಾಗೆ ಹರೇಕಳ ಹಾಜಬ್ಬರ ಬಳಿ ನೂರಾರು ಪ್ರಮುಖ ಪ್ರಶಸ್ತಿಗಳು, 500ಕ್ಕೂ ಅಧಿಕ ಗೌರವ ಸನ್ಮಾನಗಳು, ಸಾವಿರಕ್ಕೂ ಅಧಿಕ ಕಡೆ ಅತಿಥಿಯಾಗಿ ತೆರಳಿ ಸ್ವೀಕರಿಸಲಾದ ಸನ್ಮಾನ ಪತ್ರಗಳನ್ನು ಜೋಡಿಸಿಡಲು ಯೆನೆಪೋಯ ವಿವಿಯ ಕುಲಾಧಿಪತಿ ವೈ.ಅಬ್ದುಲ್ಲಾ ಕುಂಞಿ ಹಾಜಬ್ಬರ ಮನೆಯ ಪಕ್ಕದಲ್ಲೇ 600 ಚ.ಅ.ಯ ನೂತನ ಕಟ್ಟಡ (ಪ್ರಶಸ್ತಿ ಮನೆ) ನಿರ್ಮಿಸಿಕೊಟ್ಟಿರುವುದು ಗಮನಾರ್ಹ.

*ಹರೇಕಳ ಗ್ರಾಮದ ಹೆಸರನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಪದ್ಮಶ್ರೀ ಪುರಸ್ಕೃತ ಹಾಜಬ್ಬ ಅವರ ಪೇಂಟಿಂಗ್ ಚಿತ್ರವನ್ನು ರಾಜ್ಯದಲ್ಲೇ ಮಾದರಿ ಎಂಬಂತೆ ನಿರ್ಮಿಸಲಾದ ಹರೇಕಳ ಗ್ರಾಪಂನ ಆಡಳಿತ ಸೌಧದ ಬಲಬದಿಯಲ್ಲಿ ಚಿತ್ರಿಸಿ ಗ್ರಾಮದ ಗೌರವ ನೀಡಲಾಗಿದೆ.

*2023ರ ರಾಜ್ಯ ವಿಧಾನಸಭಾ ಚುನಾವಣಾ ಪ್ರಕ್ರಿಯೆಯಿಂದ ದೂರ ಉಳಿಯುವ ಮತದಾರರನ್ನು ಸೆಳೆಯುವ ಸಲುವಾಗಿ ದ.ಕ. ಜಿಲ್ಲಾ ಸ್ವೀಪ್ ಸಮಿತಿಯು ಹರೇಕಳ ಹಾಜಬ್ಬರನ್ನು 'ಐಕಾನ್' (ಜನಪ್ರಿಯರು)ಆಗಿ ಆಯ್ಕೆ ಮಾಡಿವೆ.

"ಪಿಯು ಕಾಲೇಜು ತರಗತಿ ಆರಂಭಿಸಲು ರಾಜ್ಯ ಸರಕಾರ ಇದೀಗ ಅನುಮತಿ ನೀಡಿರುವುದರಿಂದ ನನಗೆ ತುಂಬಾ ಸಂತೋಷವಾಗುತ್ತದೆ. ಕಳೆದ ಬಾರಿಯ ಸರಕಾರವು ಪಿಯು ಕಾಲೇಜು ಸ್ಥಾಪಿಸಲು ಗ್ರಾಮಚಾವಡಿಯಲ್ಲಿ ಜಮೀನು ಮಂಜೂರು ಮಾಡಿತ್ತು. ಈ ಬಾರಿ ಸರಕಾರವು ಪಿಯು ಕಾಲೇಜು ತರಗತಿ ಆರಂಭಿಸಲು ಅನುಮತಿ ನೀಡಿವೆ. ಅದಕ್ಕಾಗಿ ನಾನು ಹಾಲಿ ಹಾಗೂ ಮಾಜಿ ಮುಖ್ಯಮಂತ್ರಿಗೆ ಅಭಾರಿಯಾಗಿರುವೆ. ಅದರೊಂದಿಗೆ ಸ್ಪೀಕರ್ ಯು.ಟಿ. ಖಾದರ್, ಸಂಸದ ನಳಿನ್ ಕುಮಾರ್ ಕಟೀಲ್, ರಾಜ್ಯದ ಶಿಕ್ಷಣ ಸಚಿವರು, ಹರೇಕಳದ ಗ್ರಾಮದ ಹಾಲಿ ಮತ್ತು ಮಾಜಿ ಅಧ್ಯಕ್ಷರಿಗೆ ಹಾಗೂ ಸರ್ವ ವಿಧದಲ್ಲೂ ಸಹಕರಿಸಿದ ಎಲ್ಲಾ ಮಹನೀಯರಿಗೆ ವಿಶೇಷವಾಗಿ ಕೃತಜ್ಞತೆ ಸಲ್ಲಿಸುವೆ. 2024-25ನೆ ಶೈಕ್ಷಣಿಕ ವರ್ಷದಿಂದ ತರಗತಿ ಆರಂಭಿಸಲು ಪ್ರಯತ್ನ ಮುಂದುವರಿಸುವೆ".

-ಹರೇಕಳ ಹಾಜಬ್ಬ, ಪದ್ಮಶ್ರೀ ಪುರಸ್ಕೃತರು

"ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬರ ಕನಸುಗಳಲ್ಲಿ ಒಂದಾದ ಪದವಿ ಪೂರ್ವ ಕಾಲೇಜಿಗೆ ಬೇಕಾದ ಜಮೀನು ನೀಡಲು ಗ್ರಾಪಂ ಆಡಳಿತವು ಈ ಹಿಂದೆಯೇ ಸಹಕರಿಸಿದೆ. ಅದರಂತೆ ಗ್ರಾಮಚಾವಡಿ ಬಳಿ ಜಮೀನು ಮಂಜೂರಾಗಿದೆ. ಇನ್ನು ಹಾಜಬ್ಬರ ಕಾಲೇಜು ತರಗತಿ ಆರಂಭಿಸಲು ಸಹಕಾರ ನೀಡುವೆವು".

-ಬದ್ರುದ್ದೀನ್ ಹರೇಕಳ, ಮಾಜಿ ಅಧ್ಯಕ್ಷರು, ಹರೇಕಳ ಗ್ರಾಪಂ


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries