ಕಾಸರಗೋಡು: ನಗರಸಭಾ ನೂತನ ಅಧ್ಯಕ್ಷರಾಗಿ ಮುಸ್ಲಿಂಲೀಗಿನ ಅಬ್ಬಸ್ ಬೀಗಂ ಆಯ್ಕೆಯಾಗಿದ್ದಾರೆ. ಚೇರಂಗೈ ಈಸ್ಟ್ ವಾರ್ಡ್ ಸದಸ್ಯರಾಗಿರುವ ಇವರು ಪಕ್ಷದ ಒಪ್ಪಂದದನ್ವಯ ಮುಂದಿನ ಎರಡುವರೆ ವರ್ಷಗಳ ಕಾಲ ಅಧ್ಯಕ್ಷರಾಗಿ ಸೇವೆ ಸಲ್ಲಿಸಲಿದ್ದಾರೆ.
ಒಟ್ಟು 38ಮಂದಿ ಸದಸ್ಯರಿರುವ ನಗರಸಭೆಯಲ್ಲಿ ಅಬ್ಬಾಸ್ ಬೀಗಂ ಅವರಿಗೆ 20ಮತ, ಬಿಜೆಪಿ ಸದಸ್ಯ, ಅಣಂಗೂರು ವರ್ಡು ಪ್ರತಿನಿಧಿಸುತ್ತಿರುವ ಪಿ.ರಮೇಶ್ ಅವರಿಗೆ 14ಮತ ಲಭ್ಯವಾಘಿದ್ದರೆ, ಸಿಪಿಎಂನ ಎಂ. ಲಲಿತಾ, ಪಕ್ಷೇತರ ಸದಸ್ಯರದ ಸಕೀನಾಮೊಯ್ದೀನ್ ಹಾಗೂ ಹಸೀನಾ ನೌಶಾದ್ ಅವರ ಮತಗಳು ಅಸಿಂಧುಗೊಂಡಿತ್ತು. ನಗರಸಭಾ ಅಧ್ಯಕ್ಷರಾಗಿದ್ದ ವಿ.ಎಂ ಮುನೀರ್ ಅಧ್ಯಕ್ಷ ಸ್ಥಾನ ಬಿಟ್ಟುಕೊಡುತ್ತಿದ್ದಮತೆ ತಮ್ಮ ಸದಸ್ಯತ್ವಕ್ಕೂ ರಾಜೀನಾಮೆ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಮತದಾನದಲ್ಲಿ ಪಾಲ್ಗೊಂಡಿರಲಿಲ್ಲ. ನಗರದ ಖಾಸಿಲೈನ್ ವಾರ್ಡು ಸದಸ್ಯ, ವಕೀಲ ಪಿ.ಎಂ ಮುನೀರ್ ಕಳೆದ ಎರಡುವರೆ ವರ್ಷಗಳಿಂದ ನಗರಸಭಾ ಅಧ್ಯಕ್ಷರಾಗಿದ್ದರು. ಜಿಲ್ಲಾ ಕೈಗಾರಿಕಾ ಕೇಂದ್ರದ ಪ್ರಬಂಧಕ ಆದಿಲ್ ಮಹಮ್ಮದ್ ಚುನಾವಣಾಧಿಕಾರಿಯಾಗಿದ್ದರು. ಅಬ್ಬಾಸ್ ಬೀಗಂ ಅವರನ್ನು ಅಧ್ಯಕ್ಷರಾಗಿ ಘೋಷಿಸುತ್ತಿದ್ದಂತೆ ಅವರ ಬೆಂಬಲಿಗರು ಹರ್ಷಾಚರಣೆ ನಡೆಸಿದರು.
ಅದ್ಯಕ್ಷಸ್ಥಾನದಿಂದ ಕೆಳಗಿಳಿಯುತ್ತಿದ್ದಂತೆ ವಿ.ಎಂ ಮುನೀರ್ ತಮ್ಮ ಸದಸ್ಯತ್ವಕ್ಕೂ ರಾಜೀನಾಮೆ ಸಲ್ಲಿಸಿದ್ದು, ಈ ಹಿನ್ನೆಲೆಯಲ್ಲಿ ಖಾಸಿಲೈನ್ ವಾರ್ಡಿಗೆ ಶೀಘ್ರ ಉಪ ಚುನಾವಣೆಯೂ ನಡೆಯಬೇಕಾಗಿದೆ.