ಅಲಪ್ಪುಳ: ಬಿಜೆಪಿಯ ಒಬಿಸಿ ವಿಭಾಗದ ನಾಯಕ ರಂಜಿತ್ ಶ್ರೀನಿವಾಸನ್ ಕೊಲೆ ಪ್ರಕರಣದಲ್ಲಿ ತೀರ್ಪು ಪ್ರಕಟಿಸಿದ ನಂತರ, ಮಾವೆಲಿಕ್ಕರ ನ್ಯಾಯಾಲಯದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶೆಗೆ ವಿವಿಧ ಸಾಮಾಜಿಕ ವೇದಿಕೆಗಳಲ್ಲಿ ಬೆದರಿಕೆ ಒಡ್ಡಿದ ಆರೋಪದಡಿ ನಾಲ್ವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
ಇದರ ಬೆನ್ನಲ್ಲೇ, ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶೆ ವಿ.ಜಿ.ಶ್ರೀದೇವಿ ಅವರಿಗೆ ಭದ್ರತೆಯನ್ನು ಹೆಚ್ಚಿಸಲಾಗಿದೆ. ನಸೀರ್‌ಮಾನ್(47), ರಫಿ(38), ನವಾಸ್ ನೈನಾ(42) ಹಾಗೂ ಶಾಜಹಾನ್(36) ಬಂಧಿತರು.
ಬೆದರಿಕೆ ಒಡ್ಡಿರುವುದಕ್ಕೆ ಸಂಬಂಧಿಸಿ ಒಟ್ಟು ಐದು ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.