ಪೆರ್ಲ: ಬಜಕೂಡ್ಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಿಂದ ಕಳವುಗೈದ ಆರೋಪಿಯನ್ನು ಬದಿಯಡ್ಕ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕೋಟ್ಟಾಯಂ ಪೆರಿಙÉೂೀ ನಿವಾಸಿ ಬಾಬು ಕುರ್ಯಾಕೋಸ್(65)ಬಂಧಿತ. ವರ್ಷದ ಹಿಂದೆ ದೇವಸ್ಥಾನದ ಕಚೇರಿ ಬಾಗಿಲು ಒಡೆದು ನುಗ್ಗಿದ ಈತ ಕಪಾಟಿನಲ್ಲಿರಿಸಿದ್ದ ಸಣ್ಣ ಚಿನ್ನದ ಸರ, ಬೆಳ್ಳಿ ಸಾಮಗ್ರಿ ಹಾಗೂ ನಗದು ದೋಚಿದ್ದನು. ಈತನ ಕಳವುಕೃತ್ಯ ದೇವಸ್ಥಾನದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು.
ಪೊಲೀಸರು ಕೇಸು ದಾಖಲಿಸಿಕೊಳ್ಳುತ್ತಿದ್ದಂತೆ ಈತ ತಲೆಮರೆಸಿಕೊಂಡಿದ್ದು, ಬೇರೊಂದು ಪ್ರಕರಣದಲ್ಲಿ ಪಾಲಕ್ಕಾಡಿನಿಂದ ಈತನನ್ನು ಬಂಧಿಸಿ ಚಿಟ್ಟೂರ್ ಜೈಲಿನಲ್ಲಿರಿಸಲಾಗಿತ್ತು. ಪೊಲೀಸರು ಈತನನ್ನು ವಶಕ್ಕೆ ತೆಗೆದು ವಿಚಾರಣೆಗೊಳಪಡಿಸಿದಾಗ ಬಜಕೂಡ್ಲು ದೇವಸ್ಥಾನದಿಂದ ಕಳವುಗೈದಿರುವ ಬಗ್ಗೆ ಮಾಹಿತಿ ನೀಡಿದ್ದನು. ಅಂದು ದೇವಸ್ಥಾನಕ್ಕೆ ಆಗಮಿಸಿದ್ದ ಶ್ವಾನದಳ ಒಂದಷ್ಟು ದೂರ ಸಂಚರಿಸಿ ನಿಂತಿತ್ತು. ಆರೋಪಿಯನ್ನು ಭಾನುವಾರ ದೇವಸ್ಥಾನಕ್ಕೆ ಕರೆತಂದು ವಿಚಾರಣೆಗೊಳಪಡಿಸಿದಾಗ ಬಾಗಿಲು ಒಡೆಯಲು ಬಳಸಿದ್ದ ಕಬ್ಬಿಣದ ಸಲಾಕೆಯನ್ನು ಎಸೆದಿದ್ದ ಜಾಗದಿಂದ ಪತ್ತೆಹಚ್ಚಲಾಗಿದೆ. ಬದಿಯಡ್ಕ ಠಾಣೆ ಪೊಲೀಸರು ಈತನನ್ನು ಸ್ಥಳಕ್ಕೆ ಕರೆಸಿ ಸಮಗ್ರ ಮಾಹಿತಿ ಸಂಗ್ರಹಿಸಿದ್ದಾರೆ.