ಆಲಪ್ಪುಳ: ರಂಜಿತ್ ಶ್ರೀನಿವಾಸನ್ ಹತ್ಯೆ ಪ್ರಕರಣದ ತೀರ್ಪು ನೀಡಿದ ನ್ಯಾಯಾಧೀಶರಿಗೆ ಜೀವ ಬೆದರಿಕೆ ನೀಡಲಾಗಿದ್ದು, ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಆರು ಜನರ ವಿರುದ್ಧ ಆಲಪ್ಪುಳ ದಕ್ಷಿಣ ಪೋಲೀಸರು ಪ್ರಕರಣ ದಾಖಲಿಸಿದ್ದಾರೆ.
ನಿಷೇಧಿತ ಭಯೋತ್ಪಾದಕ ಸಂಘಟನೆ ಪಿಎಫ್‍ಐನ ಈ ಬೆಂಬಲಿಗರು ಸಾಮಾಜಿಕ ಜಾಲತಾಣಗಳ ಮೂಲಕ ನ್ಯಾಯಾಧೀಶ ವಿಜಿ ಶ್ರೀದೇವಿ ಅವರನ್ನು ಅವಮಾನಿಸಿ ಬೆದರಿಕೆ ಹಾಕಿದ್ದಾರೆ.
ಘಟನೆಯಲ್ಲಿ ಮೂವರನ್ನು ಪೋಲೀಸರು ವಶಕ್ಕೆ ಪಡೆದಿದ್ದಾರೆ. ಆಲಪ್ಪುಳ ಮನ್ನಂಚೇರಿ ಮೂಲದ ವ್ಯಕ್ತಿ ಹಾಗೂ ತಿರುವನಂತಪುರಂ ಪೋತನ್ ಕೋಟ್ ಮೂಲದ ವ್ಯಕ್ತಿಯೊಬ್ಬರು ಪೋಲೀಸರ ವಶದಲ್ಲಿದ್ದಾರೆ. ವಿಜಿ ಶ್ರೀದೇವಿಗೆ ಜೀವ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಪೋಲೀಸರು ಭದ್ರತೆ ಒದಗಿಸಿದ್ದರು.
ಒಬಿಸಿ ಮೋರ್ಚಾದ ರಾಜ್ಯ ಕಾರ್ಯದರ್ಶಿಯಾಗಿದ್ದ ವಕೀಲ ರಂಜಿತ್ ಶ್ರೀನಿವಾಸನ್ ಅವರ ಮನೆಗೆ ಮುಂಜಾನೆ ನುಗ್ಗಿದ ದುಷ್ಕರ್ಮಿಗಳ ಗುಂಪೆÇಂದು ಅವರ ಪತ್ನಿ ಮತ್ತು ತಾಯಿಯ ಎದುರೇ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿತ್ತು. ಪ್ರಕರಣದ ಎಲ್ಲಾ 15 ಆರೋಪಿಗಳಿಗೆ ಮಾವೇಲಿಕ್ಕರ ಸೆಷನ್ಸ್ ನ್ಯಾಯಾಲಯ ಮರಣದಂಡನೆ ವಿಧಿಸಿದೆ. ಇದರ ಬೆನ್ನಲ್ಲೇ ಸೈಬರ್ ದಾಳಿ ನಡೆದಿದೆ. ಎಸ್‍ಡಿಪಿಐ ಮುಖಂಡರ ಫೇಸ್‍ಬುಕ್ ಪುಟಗಳಲ್ಲಿ ನಿಂದನೀಯ ಪೋಸ್ಟ್ ಗಳು ಕಾಣಿಸಿಕೊಂಡಿವೆ. ನ್ಯಾಯಾಧೀಶರ ಚಿತ್ರದೊಂದಿಗೆ ಪೋಸ್ಟ್‍ಗಳನ್ನು ಹಂಚಿಕೊಳ್ಳಲಾಗಿದೆ.