ಜೈಪುರ: ಸಾಹಿತ್ಯ ಮತ್ತು ಸಂಸ್ಕೃತಿಯ ಬೃಹತ್ ಜಾತ್ರೆ 'ಜೈಪುರ ಲಿಟರೇಚರ್ ಫೆಸ್ಟಿವಲ್'ನ ಮೊದಲ ದಿನವಾದ ಗುರುವಾರ ಪ್ರಜಾಪ್ರಭುತ್ವ ವ್ಯವಸ್ಥೆಯ ಕುರಿತು ಪದೇ ಪದೇ ಮಾತುಗಳು ಕೇಳಿಬಂದವು. 'ಒಂದು ರಾಷ್ಟ್ರ ಒಂದು ಚುನಾವಣೆ' ಎಂಬ ಪರಿಕಲ್ಪನೆಯೊಂದಿಗೆ ಮುನ್ನುಗ್ಗುತ್ತಿರುವ ಸಂದರ್ಭದಲ್ಲಿ ಒಂದು ರಾಷ್ಟ್ರದಲ್ಲಿರುವ ವೈವಿಧ್ಯದ ಬಗ್ಗೆ ಗಮನಹರಿಸುವ ಅವಕಾಶವನ್ನು ಕಳೆದುಕೊಳ್ಳಬಾರದು ಎಂದು ನಿವೃತ್ತ ಚುನಾವಣಾ ಆಯುಕ್ತರಾದ ಎಸ್.ವೈ.ಖುರೇಶಿ ಅಭಿಪ್ರಾಯಪಟ್ಟರು.
'ಪ್ರಜಾಪ್ರಭುತ್ವ, ಚುನಾವಣೆ ಮತ್ತು ನಾಗರಿಕತೆ' ಗೋಷ್ಠಿಯಲ್ಲಿ ಮಾತನಾಡುತ್ತ, 'ಭಾರತೀಯ ಪ್ರಜಾಪ್ರಭುತ್ವದಲ್ಲಿ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಮತ್ತು ಗ್ರಾಮ ಪಂಚಾಯಿತಿಗೆ ಪ್ರತ್ಯೇಕವಾದ, ವಿಭಿನ್ನ ರೀತಿಯ ಅಧಿಕಾರವಿದೆ. ಒಂದು ರಾಜ್ಯದ ಸಮಸ್ಯೆಯು ಮತ್ತೊಂದು ರಾಜ್ಯದಲ್ಲಿ ಇರುವುದಿಲ್ಲ. ಗ್ರಾಮ ಪಂಚಾಯಿತಿಯಲ್ಲಿ ಎದುರಾಗುವ ಸಮಸ್ಯೆಗಳೇ ಬೇರೆ ರೀತಿಯದ್ದು. ಪ್ರಸ್ತುತ, ಒಂದು ರಾಷ್ಟ್ರ ಒಂದು ಚುನಾವಣೆ ಎಂಬ ಪರಿಕಲ್ಪನೆಯಿಂದ ಚುನಾವಣಾ ವ್ಯವಸ್ಥೆಗೆ ಆಗುವ ಲಾಭಗಳ ಬಗ್ಗೆಯಷ್ಟೇ ಚರ್ಚೆಯಾಗುತ್ತಿದೆಯೇ ಹೊರತು, ಅದು ನಾಗರಿಕರ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಹೇಗೆ ಬಲಪಡಿಸುತ್ತದೆ ಎಂಬ ನಿಟ್ಟಿನಲ್ಲಿ ಚರ್ಚೆಗಳು ನಡೆಯುತ್ತಿಲ್ಲ. ಅಂತಿಮವಾಗಿ ಪ್ರಜಾಪ್ರಭುತ್ವವು ಜನರಿಂದ ಜನರಿಗಾಗಿ ರೂಪುಗೊಂಡ ವ್ಯವಸ್ಥೆ ಎಂಬುದನ್ನು ನಾವು ಮರೆಯಬಾರದು' ಎಂದು ಹೇಳಿದರು. ಹಿರಿಯ ಪತ್ರಕರ್ತ ಗಿರೀಶ್ ಕುಬೇರ್ ಈ ಮಾತಿಗೆ ಸಹಮತ ವ್ಯಕ್ತಪಡಿಸಿ, ಸಂಸದರೂ ಸೇರಿ ಪ್ರಧಾನಿಯನ್ನು ಆಯ್ಕೆ ಮಾಡುವುದು ಪ್ರಜಾಪ್ರಭುತ್ವದ ಲಕ್ಷಣ ಎನ್ನುವುದನ್ನು ನೆನಪಿನಲ್ಲಿಡಬೇಕು' ಎಂದರು. ಸ್ಥಳೀಯ, ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ನಡೆಯುವ ರಾಜಕೀಯ ಚಳವಳಿಗಳಿಗೆ ಏಕರಾಷ್ಟ್ರ ಏಕ ಚುನಾವಣೆ ತೊಡಕಾದೀತು ಎಂದು ರಾಜಕೀಯ ವಿಜ್ಞಾನಿ ಯಾಶಾ ಮಾಂಕಾ ಅಭಿಪ್ರಾಯಟ್ಟರು.
ಬೂಕರ್ ಪ್ರಶಸ್ತಿ ವಿಜೇತ ಕೃತಿ 'ದ ಪ್ರೊಫೆಟ್ ಸಾಂಗ್' ನ ಲೇಖಕ ಪೌಲ್ ಲಿಂಚ್ ಅವರು ತಮ್ಮ ಪುಸ್ತಕದ ಕುರಿತು ಮಾತನಾಡಿದ ಗೋಷ್ಠಿಯಲ್ಲಿಯೂ ಪ್ರಜಾಪ್ರಭುತ್ವ ಮತ್ತು ನಿರಂಕುಶ ಪ್ರಭುತ್ವಕ್ಕೆ ಸಂಬಂಧಿಸಿದ ಮಾತುಗಳು ಪ್ರಸ್ತಾಪವಾದವು. ಒಂದು ದೇಶದ ಸಾಮಾಜಿಕ ವ್ಯವಸ್ಥೆಯು ಹೇಗೆ ನಿಧಾನವಾಗಿ ನಿರಂಕುಶವಾಗುತ್ತ ಸಾಗುತ್ತದೆ ಎಂಬುದನ್ನು ಗಮನಿಸಿಯೇ ಈ ಕೃತಿಯನ್ನು ಬರೆದಿರುವೆ. ಇದ್ದಕ್ಕಿದ್ದಂತೆಯೇ ನಾಪತ್ತೆಯಾದವರ ಸುಳಿವಿಲ್ಲದೇ ಅವರ ಕುಟುಂಬಗಳು ಹೇಗೆ ಬಳಲುತ್ತವೆ ಎಂಬ ವಿಷಯವನ್ನು ಆಧರಿಸಿದ ಕಾದಂಬರಿಯಿದು. ಐರ್‌ಲೆಂಡ್‌ನ ಸಾಮಾಜಿಕತೆಯು ನಿರಂಕುಶತೆಯತ್ತ ಸಾಗುತ್ತಿರುವುದನ್ನು ಗಮನಿಸಿದರೆ ಆತಂಕವಾಗುತ್ತದೆ. ಆದರೆ ಲೇಖಕರು ಒಂದು ಸಮಸ್ಯೆಯನ್ನು ಬಗೆಹರಿಸಿಬಿಡುತ್ತೇವೆ ಎಂಬ ಧಾವಂತದಲ್ಲಿ ಏನನ್ನೇ ಬರೆದರೂ ಪ್ರಯೋಜನವಾಗುವುದಿಲ್ಲ. ಅವರ ಬರಹಗಳು ಸಾವಧಾನದಲ್ಲಿ ಪಿಸುಮಾತಿನಂತೆ ಮೂಡಿ ಸಮಾಜವನ್ನು ಎಚ್ಚರಿಸಬೇಕು ಎಂದು ಹೇಳಿದರು.
ಕುಮಾರ ಗಂಧರ್ವರ ಕೃತಿಗಳ ಮುದ
ನಗರದ ಹೋಟೆಲ್ ಕ್ಲಾರ್ಕ್ಸ್ ಅಮೀರ್‌ನಲ್ಲಿ ಬುಧವಾರ ಸುದೀರ್ಘ ಶಂಖನಾದದ ಹಿನ್ನೆಲೆಯಲ್ಲಿ 'ಜೈಪುರ್ ಲಿಟರೇಚರ್ ಫೆಸ್ಟಿವಲ್'ಗೆ ರಾಜಸ್ಥಾನದ ಉಪಮುಖ್ಯಮಂತ್ರಿ ದಿಯಾ ಕುಮಾರಿ ಚಾಲನೆ ನೀಡಿದರು. ಇದಕ್ಕೂ ಮುನ್ನ ಪ್ರಸಿದ್ಧ ಗಾಯಕ ಪಂಡಿತ್ ಕುಮಾರ್ ಗಂಧರ್ವ ಅವರ ಜನ್ಮ ಶತಮಾನ ವರ್ಷದ ಹಿನ್ನೆಲೆಯಲ್ಲಿ ಅವರ ಮಗಳಾದ ಕಲಾಪಿನಿ ಕೋಮ್ಕಲಿ ಸಂಗೀತ ಕಛೇರಿ ನಡೆಸಿಕೊಟ್ಟರು. ಕಿಕ್ಕಿರಿದ ಶ್ರೋತೃ ಸಮೂಹವು ಕುಮಾರ ಗಂಧರ್ವ ಅವರು ಹಾಡಿದ್ದ ಪ್ರಸಿದ್ಧ ಕಬೀರರ ಕೃತಿಗಳನ್ನು ಮತ್ತೆ ಹಾಡುವಂತೆ ಕೇಳಿ ಆನಂದಿಸಿತು. ಬಳಿಕ ಕವಿ ಗುಲ್ಜಾರ್ ಅವರ ಮಾತು ಶಾಯರಿಗಳು ವಾತಾವರಣಕ್ಕೆ ಕಾವ್ಯದ ಸೊಬಗನ್ನು ತುಂಬಿದವು.