ಬದಿಯಡ್ಕ: ಒಂದು ರಾಜಗೋಪುರವು ಆ ದೇವಸ್ಥಾನಕ್ಕೆ ಹಾಗೂ ಊರಿಗೆ ಶೋಭೆ ತರುತ್ತದೆ. ದೇವಾಲಯಗಳು ಊರಿನ ಔನ್ಯತ್ಯದ ಪ್ರತೀಕವಾಗಿದೆ. ದೇವಮಂದಿರಗಳು, ವಿದ್ಯಾಲಯಗಳು ಉಚ್ಛಸ್ಥಾನದಲ್ಲಿದ್ದರೆ ಆ ಊರು ಸುಭಿಕ್ಷೆಯಿಂದ ಕೂಡಿರುತ್ತದೆ ಎಂದು ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ನುಡಿದರು.
ಕಾರ್ಮಾರು ಶ್ರೀ ಮಹಾವಿಷ್ಣು ದೇವಸ್ಥಾನದ ಜೀರ್ಣೋದ್ಧಾರ ಕಾರ್ಯವು ಭರದಿಂದ ಸಾಗುತ್ತಿದ್ದು, ದೇವಾಲಯದ ಮುಂಭಾಗದಲ್ಲಿ ನಿರ್ಮಾಣಗೊಳ್ಳಲಿರುವ ರಾಜಗೋಪುರಕ್ಕೆ ನಿನ್ನೆ ಶಿಲಾನ್ಯಾಸಗೈದು ಅವರು ಆಶೀರ್ವಚನವನ್ನು ನೀಡಿದರು.
ಇಲ್ಲಿನ ಭಕ್ತಜನರ ಕಠಿಣ ಪರಿಶ್ರಮ, ಮನಸಾ ಭಕ್ತಿಯ ಪ್ರಾರ್ಥನೆಗೆ ದೇವರ ಅನುಗ್ರಹವಾಗಿದೆ ಎಂಬುದು ಇಲ್ಲಿನ ಕೆಲಸಕಾರ್ಯಗಳನ್ನು ಗಮನಿಸಿದಾಗ ವೇದ್ಯವಾಗುತ್ತದೆ. ರಾಜಗೋಪುರ ಶೀಘ್ರವಾಗಿ ತಲೆಯೆತ್ತಿ ನಿಲ್ಲಲಿ ಎಂದರು.
ಜೀರ್ಣೋದ್ಧಾರ ಸಮಿತಿಯ ರಕ್ಷಾಧಿಕಾರಿ ಜಯದೇವ ಖಂಡಿಗೆ ಅಧ್ಯಕ್ಷತೆ ವಹಿಸಿದ್ದರು. ಪದ್ಮಶ್ರೀ ಪ್ರಶಸ್ತಿ ಪುರಸ್ಕøತ ಸತ್ಯನಾರಾಯಣ ಬೆಳೇರಿ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, ಕಹಳೆ ನ್ಯೂಸ್ ಪ್ರಧಾನ ಸಂಪಾದಕ ಶ್ಯಾಮ ಸುದರ್ಶನ್ ಹೊಸಮೂಲೆ, ಕೆನರಾ ಬ್ಯಾಂಕ್ ವ್ಯವಸ್ಥಾಪಕ ರಾಹುಲ್ ಅಶೋಕ್, ಅಖಿಲೇಶ್ ನಗುಮುಗಂ, ನರೇಂದ್ರ ಬಿ.ಎನ್., ವೆಂಕಟ ಗಿರೀಶ್ ಪಟ್ಟಾಜೆ ವೇದಿಕೆಯಲ್ಲಿ ಉಪಸ್ಥಿತರಿದ್ದು ಮಾತನಾಡಿದರು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೃಷ್ಣಮೂರ್ತಿ ಪುದುಕೋಳಿ ಸ್ವಾಗತಿಸಿ, ಜೀರ್ಣೋದ್ಧಾರ ಸಮಿತಿಯ ಜೊತೆಕಾರ್ಯದರ್ಶಿ ವಿಜಯ ಕುಮಾರ್ ಮಾನ್ಯ ವಂದಿಸಿದರು. ಕಾರ್ಯದರ್ಶಿ ಮಹೇಶ್ ಕುಮಾರ್ ಮಾನ್ಯ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಉಪಾಧ್ಯಕ್ಷ ಸುಂದರ ಶೆಟ್ಟಿ ಕೊಲ್ಲಂಗಾನ ನಿರೂಪಿಸಿದರು.