ಕುಂಬಳೆ: ಎಲ್ಲರಿಗೂ ಭೂಮಿ ಮತ್ತು ಭೂ ರಹಿತ ಕೇರಳ ಎಂಬುದೇ ರಾಜ್ಯ ಸರ್ಕಾರದ ಗುರಿ ಎಂದು ರಾಜ್ಯ ಕಂದಾಯ ಮತ್ತು ವಸತಿ ಇಲಾಖೆ ಸಚಿವ ಕೆ.ರಾಜನ್ ತಿಳಿಸಿದರು. ಅಕ್ರಮ ಒತ್ತುವರಿದಾರರಿಂದ ಭೂಮಿ ವಶಪಡಿಸಿಕೊಂಡು ಭೂ ರಹಿತರಿಗೆ ಹಂಚಲು ಸರ್ಕಾರ ಹಿಂಜರಿಯುವುದಿಲ್ಲ ಎಂದವರು ಭರವಸೆ ನೀಡಿದರು.
ಎಡನಾಡು ಗ್ರೂಪ್ ಸ್ಮಾರ್ಟ್ ಗ್ರಾಮ ಕಚೇರಿಯನ್ನು ಶನಿವಾರ ಆನ್‍ಲೈನ್ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ಇನ್ನೂ 35 ಗ್ರಾಮ ಕಚೇರಿಗಳು ಸ್ಮಾರ್ಟ್ ಆಗುತ್ತಿವೆ. 'ಎಲ್ಲರಿಗೂ ಭೂಮಿ, ಎಲ್ಲಾ ಭೂಮಿ ಮತ್ತು ಎಲ್ಲಾ ಸೇವೆಗಳಿಗೆ ದಾಖಲೆಗಳು ಸ್ಮಾರ್ಟ್' ಎಂಬ ಧ್ಯೇಯದೊಂದಿಗೆ ರಾಜ್ಯದ ಕಂದಾಯ ಇಲಾಖೆಯು ಇತ್ತೀಚೆಗೆ ವೇಗವಾಗಿ ಸಾಗುತ್ತಿದೆ. ಈ ಗುರಿಯನ್ನು ಸಾಧಿಸಲು ಸರ್ಕಾರವು ಪಟ್ಟಯ(ಭೂದಾಖಲೆ) ಮಿಷನ್ ಎಂಬ ಹೊಸ ಯೋಜನೆಯನ್ನು ಜಾರಿಗೊಳಿಸುತ್ತಿದೆ. ಕಳೆದ ಎರಡು ವರ್ಷಗಳಲ್ಲಿ, ಸುಮಾರು 250,000 ಭೂ ದಾಖಲೆಗಳನ್ನು ವಿತರಿಸಲಾಗಿದೆ. ಇನ್ನೂ 30,000 ಭೂದಾಖಲೆಗಳನ್ನು ಸಿದ್ಧಪಡಿಸಲಾಗಿದೆ. ಫೆಬ್ರವರಿ ತಿಂಗಳೊಳಗೆ ಒಂದೂವರೆ ಲಕ್ಷ ಜನರನ್ನು ಭೂಮಾಲೀಕರನ್ನಾಗಿ ಮಾಡುವ ಅಪರೂಪದ ಗೌರವಕ್ಕೆ ರಾಜ್ಯ ಸರ್ಕಾರ ಪಾತ್ರವಾಗಲಿದೆ. ನ.1ರ ವೇಳೆಗೆ ಸಂಪೂರ್ಣ ಡಿಜಿಟಲೀಕರಣಗೊಂಡಿರುವ ಕಂದಾಯ ಇಲಾಖೆಯಲ್ಲಿ ಕಡತಗಳು ಬಾಕಿ ಉಳಿದಿವೆ ಎಂಬ ದೂರು ನಿವಾರಣೆಯಾಗಲಿದೆ ಎಂದು ಸಚಿವರು ತಿಳಿಸಿದರು.
ಮಂಜೇಶ್ವರ ಶಾಸಕ ಎ.ಕೆ.ಎಂ.ಅಶ್ರಫ್ ಅಧ್ಯಕ್ಷತೆ ವಹಿಸಿದ್ದರು. ಶಾಸಕರು ಫಲಕ ಅನಾವರಣಗೊಳಿಸಿದರು. ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್, ಪುತ್ತಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಡಿ.ಸುಬ್ಬಣ್ಣ ಆಳ್ವ, ಜಿಲ್ಲಾ ಪಂಚಾಯಿತಿ ಸದಸ್ಯ ನಾರಾಯಣ ನಾಯ್ಕ್, ಬ್ಲಾಕ್ ಪಂಚಾಯಿತಿ ಸದಸ್ಯೆ ಎಂ.ಚಂದ್ರಾವತಿ, ಪುತ್ತಿಗೆ ಗ್ರಾಮ ಪಂಚಾಯಿತಿ ಸದಸ್ಯೆ ಅನಿತಾಶ್ರೀ, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ಪ್ರದೀಪ್ ಕುಮಾರ್, ಕೃಷ್ಣ ಆಳ್ವ, ಸುಲೈಮಾನ್ ಉಜಂಪದವು, ಪಿ.ಅಬ್ದುಲ್ಲ ಕಾಂತಿಲ, ರಾಘವ ಚೇರಾಲ್, ಹಮೀದ್ ಕಾಸ್ಮೋಸ್, ಉದಯರಾಜನ್, ಮನೋಜ್ ಕುಮಾರ್, ಸಿದ್ದಿಕ್ ಕೊಡ್ಯಮೆ, ಪ್ರವೀಣ್ ಕುಂಬಳೆ, ಅಹ್ಮದ್ ಅಲಿ ಕುಂಬಳೆ, ತಾಜುದ್ದೀನ್ ಮೊಗ್ರಾಲ್, ಕೆ.ಪಿ. ಮುನೀರ್, ಜಯಂತ ಪಾಟಾಳಿ, ಟಿ.ಕೆ. ಕುಂಞಮು, ಅಝೀಝ್ ಬೇರಿಕೆ ಮೊದಲಾದವರು ಮಾತನಾಡಿದರು. ಜಿಲ್ಲಾ ನಿರ್ಮಿತಿ ಕೇಂದ್ರದ ಯೋಜನಾ ಅಭಿಯಂತ ಪಿ.ಆರ್.ಸುಂದರೇಶನ್ ವರದಿ ಮಂಡಿಸಿದರು. ಭೂ ಕಂದಾಯ ಆಯುಕ್ತ ಡಾ. ಎ. ಕೌಶಿಗನ್ ಸ್ವಾಗತಿಸಿ, ಎಡಿಎಂ ಕೆ.ವಿ. ಶ್ರುತಿ ವಂದಿಸಿದರು.