ಜೈಪುರ: ಅಬುಧಾಬಿಯಲ್ಲಿ ಇದೇ 14ರಂದು ಉದ್ಘಾಟನೆಗೊಳ್ಳಲಿರುವ ಯುಎಇಯ ಮೊದಲ ಹಿಂದೂ ದೇವಾಲಯದಲ್ಲಿ ರಾಜಸ್ಥಾನದ ಶಿಲ್ಪಿಗಳು ಕೆತ್ತಿರುವ ಅಮೃತ ಶಿಲೆಯ ಕಂಬಗಳು, ಕಲಾಕೃತಿಗಳು, ರಾಮ ಮತ್ತು ಕೃಷ್ಣನ ವಿಗ್ರಹಗಳು ಮುಂತಾದವು ಗಮನ ಸೆಳೆಯಲಿವೆ. ಈ ದೇಗಲುಕ್ಕಾಗಿ ರಾಜಸ್ಥಾನದ ಕಲಾವಿದರು 4 ವರ್ಷಗಳಿಂದ ಅವಿರತ ಶ್ರಮಪಟ್ಟಿದ್ದಾರೆ.
ರಾಜಸ್ಥಾನದ ಮಕ್ರಾನಾದ ಹಳ್ಳಿಗಳ ಕುಶಲಕರ್ಮಿಗಳು, ತಮ್ಮ ಆಕರ್ಷಕ ಶಿಲ್ಪಕಲೆಯೊಂದಿಗೆ ಭವ್ಯವಾದ ದೇವಾಲಯಕ್ಕೆ ಜೀವ ತುಂಬುವ ಕಾರ್ಯವನ್ನು 2019ರಲ್ಲಿ ಆರಂಭಿಸಿದ್ದರು. ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲೂ ಅವರ ಪಯಣ ನಿಂತಿರಲಿಲ್ಲ.
ನಾನು ನಮ್ಮ ಕುಟುಂಬದ ಮೂರನೇ ತಲೆಮಾರಿನ ಶಿಲ್ಪಿ. ಅಬುಧಾಬಿಯಲ್ಲಿ ಹಿಂದೂ ದೇವಾಲಯ ನಿರ್ಮಾಣದ ಮಾಹಿತಿ ಕೇಳಿ ಬಹಳ ಉತ್ಸುಕನಾಗಿದ್ದೆ. ಕಲ್ಲಿನಲ್ಲಿ ಕಲೆ ಅರಳಿಸಲು ಬಹಳ ಶ್ರಮಪಟ್ಟಿದ್ದೇವೆ. ಸಹೋದರತ್ವ ಮತ್ತು ಕೋಮು ಸೌಹಾರ್ದತೆಯ ಸಂದೇಶ ಸಾರಲು ಇದಕ್ಕಿಂತ ಉದಾಹರಣೆ ಬೇಕೆ? ಎಂದು ಶಿಲ್ಪಿ ರಾಮ ಕಿಶನ್ ಸಿಂಗ್ ಹೇಳಿದ್ದಾರೆ.
'ದೇಗುಲದ 83 ಆಕೃತಿಗಳ ಕೆತ್ತನೆಯಲ್ಲಿ ನಾನು ಕೆಲಸ ಮಾಡಿದ್ದೇನೆ'ಎಂದೂ ಅವರು ತಿಳಿಸಿದ್ದಾರೆ.
ದೇವಾಲಯವನ್ನು ದುಬೈ-ಅಬುಧಾಬಿ ಶೇಖ್ ಜಯೇದ್ ಹೆದ್ದಾರಿಯ ಸಮೀಪ 27 ಎಕರೆ ಪ್ರದೇಶದಲ್ಲಿ ಬಿಎಪಿಎಸ್ ಸ್ವಾಮಿ ನಾರಾಯಣ ಸಂಸ್ಥೆ ನಿರ್ಮಿಸಿದೆ.
ರಾಜಸ್ಥಾನ ಮತ್ತು ಗುಜರಾತ್‌ನ ಸೃಜನಶೀಲ ಕುಶಲ ಕರ್ಮಿಗಳು ರಚಿಸಿರುವ 25,000 ದಷ್ಟು ಅಮೃತಶಿಲೆಯ ಮತ್ತು ಸ್ಯಾಂಡ್‌ಸ್ಟೋನ್ ಕೆತ್ತನೆಗಳನ್ನು ದೇಗುಲದಲ್ಲಿ ಬಳಸಲಾಗಿದೆ.
'ಯುಎಇಯಲ್ಲಿ ತಾಪಮಾನವು 50 ಡಿಗ್ರಿ ಸೆಲ್ಸಿಯಸ್ ದಾಟುತ್ತದೆ. ಅದನ್ನು ಗಮನದಲ್ಲಿಟ್ಟುಕೊಂಟು ಕಲ್ಲುಗಳ ಆಯ್ಕೆ ಮಾಡಲಾಗಿದೆ. ಇಟಾಲಿಯನ್ ಮಾರ್ಬಲ್ ಬಳಸಲಾಗಿದೆ' ಎಂದು ರಾಜಸ್ಥಾನದ ಕುಶಲ ಕರ್ಮಿ ಸೋಮ್ ಸಿಂಗ್ ಹೇಳಿದ್ದಾರೆ.
ಎರಡು ಗುಮ್ಮಟ, ಯುಎಎಇಯ ಏಳು ಎಮಿರೇಟ್‌ಗಳನ್ನು ಬಿಂಬಿಸುವ 7 ಶಿಖರಗಳು, 12 ಸಮ್ರಾನ್(ಗುಮ್ಮಟ ರೀತಿಯ ಆಕೃತಿಗಳು) ಹಾಗೂ 402 ಕಂಬಗಳು ದೇಗುಲದಲ್ಲಿವೆ.
ಪ್ರತಿ ಶಿಖರದಲ್ಲೂ ರಾಮಾಯಣ, ಶಿವ ಪುರಾಣ, ಭಾಗವತ, ಮಹಾಭಾರತ, ಭಗವಂತ ಜಗನ್ನಾಥ, ಭಗವಂತ ಸ್ವಾಮಿನಾರಾಯಣ, ಭಗವಂತ ವೆಂಕಟೇಶ್ವರ, ಅಯ್ಯಪ್ಪನ ಕಥೆಗಳನ್ನು ಹೇಳುವ ಸೂಕ್ಷ್ಮ ಕೆತ್ತನೆಗಳನ್ನು ಮಾಡಲಾಗಿದೆ.