ಕೋಲ್ಕತ್ತ (PTI): ರಾಜ್ಯದ, ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ (ನರೇಗಾ) 21 ಲಕ್ಷ ಕಾರ್ಮಿಕರ ಬ್ಯಾಂಕ್ ಖಾತೆಗಳಿಗೆ ಫೆಬ್ರುವರಿ 21ರ ಒಳಗೆ ವೇತನ ವರ್ಗಾವಣೆ ಮಾಡಲಾಗುವುದು ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಶನಿವಾರ ಹೇಳಿದ್ದಾರೆ.

ನರೇಗಾ, ಪ್ರಧಾನ ಮಂತ್ರಿ ಆವಾಸ್ ಯೋಜನೆಯಂಥ ಕಲ್ಯಾಣ ಯೋಜನೆಗಳ ಬಾಕಿ ಹಣ ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರವನ್ನು ಆಗ್ರಹಿಸಿ ಟಿಎಂಸಿ ನಾಯಕರು ಕೋಲ್ಕತ್ತದ ಮೈದಾನ ಪ್ರದೇಶದಲ್ಲಿಯ ಅಂಬೇಡ್ಕರ್ ಪ್ರತಿಮೆ ಎದುರು ಧರಣಿ ನಡೆಸುತ್ತಿದ್ದಾರೆ. ಭಾನುವಾರ ಈ ಧರಣಿ ಅಂತ್ಯವಾಗಲಿದೆ. ಅಷ್ಟರೊಳಗೆ ಮಮತಾ ಈ ಘೋಷಣೆ ಮಾಡಿದ್ದಾರೆ.
ಆವಾಸ್ ಯೋಜನೆ ಕುರಿತೂ ಶೀಘ್ರದಲ್ಲೇ ರಾಜ್ಯ ಸರ್ಕಾರದ ನಿರ್ಧಾರ ಪ್ರಕಟಿಸಲಾಗುವುದು ಎಂದು ಅವರು ಹೇಳಿದ್ದಾರೆ.
'ಕಳೆದ 3 ವರ್ಷಗಳಿಂದ, ನರೇಗಾ ಅಡಿ ಕೂಲಿ ಕೆಲಸ ಮಾಡುತ್ತಿರುವ 21 ಲಕ್ಷ ಕಾರ್ಮಿಕರಿಗೆ ಕೇಂದ್ರ ಸರ್ಕಾರ ವೇತನ ನೀಡಿಲ್ಲ. ಅವರ ಬ್ಯಾಂಕ್ ಖಾತೆಗಳಿಗೆ ರಾಜ್ಯ ಸರ್ಕಾರವೇ ಹಣ ವರ್ಗಾಯಿಸಲಿದೆ. ನಾವು ಬಿಜೆಪಿ ಎದುರು ಭಿಕ್ಷೆ ಬೇಡಬೇಕಾಗಿಲ್ಲ' ಎಂದು ಮಮತಾ ಹೇಳಿದರು.
'ಪಶ್ಚಿಮ ಬಂಗಾಳವನ್ನು ಉಪವಾಸಗೆಡವಿ ಸಾಯಿಸಬಹುದು ಎಂದು ಕೇಂದ್ರ ಅಂದಾಜಿಸಿದೆ. ಆದರೆ, ಅದಕ್ಕೆ ನಾವು ಅವಕಾಶ ನೀಡುವುದಿಲ್ಲ. ನನ್ನಲ್ಲಿ ಭರವಸೆ ಇಡಿ. ಹಂತಹಂತವಾಗಿ ವೇತನದ ಹಣವನ್ನು ನೀಡುತ್ತೇವೆ' ಎಂದು ಕಾರ್ಮಿಕರಿಗೆ ಭರವಸೆ ನೀಡಿದರು.
ಲೋಕಸಭೆ ಚುನಾವಣೆಯಲ್ಲಿ ವಿರೋಧ ಪಕ್ಷಗಳು ಒಗ್ಗಟ್ಟಿನಿಂದ ಹೋರಾಡಿದರೆ ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರವನ್ನು ಬುಡಮೇಲು ಮಾಡಬಹುದು ಎಂದರು. ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ) ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ರಾಜ್ಯದಲ್ಲಿ ಜಾರಿಯಾಗಲು ಅವಕಾಶ ನೀಡುವುದಿಲ್ಲ ಎಂದು ಪುನರುಚ್ಚರಿಸಿದರು.