ದಾವಣಗೆರೆ: 'ಗ್ರಾಮೀಣ ಭಾಗದ ಪತ್ರಕರ್ತರು, ಸ್ಥಳೀಯ ಪತ್ರಿಕೆಗಳ ಪತ್ರಕರ್ತರು ಕೀಳರಿಮೆ ಇಟ್ಟುಕೊಳ್ಳದೇ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಪ್ರತಿಧ್ವನಿಸುವಂತಹ ವಿಶೇಷ ವರದಿಗಳನ್ನು ಬರೆಯಬೇಕು' ಎಂದು ಹಿರಿಯ ಪತ್ರಕರ್ತ ಎಸ್.ಕೆ.ಶೇಷಚಂದ್ರಿಕಾ ಅಭಿಪ್ರಾಯಪಟ್ಟರು.
ಪತ್ರಕರ್ತರ ಸಮ್ಮೇಳನದಲ್ಲಿ ಭಾನುವಾರ 'ಸಾಮಾಜಿಕ ಮಾಧ್ಯಮ ಮತ್ತು ವೃತ್ತಿ ವಿಶ್ವಾಸಾರ್ಹತೆ' ವಿಚಾರಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾಷೆಯು ಓದುಗರ ಹೃದಯ ಮುಟ್ಟುವಂತಿರಬೇಕು. ಪತ್ರಿಕೋದ್ಯಮ ಭಾಷೆಯ ಸುಧಾರಣೆ ಅಗತ್ಯ' ಎಂದು ಹೇಳಿದರು.
'ಕೃತಕ ಬುದ್ಧಿಮತ್ತೆಯು (ಎ.ಐ) ನಿಮ್ಮ ಬರವಣಿಗೆಯ ಕೆಲಸವನ್ನು ಕಿತ್ತುಕೊಳ್ಳುವ ಮುನ್ನ ನಿಮ್ಮ ಪ್ರತಿಭೆಯು ಬೆಳಗಲಿ. ಪತ್ರಕರ್ತರು ಹೆಚ್ಚೆಚ್ಚು ಬರೆಯಬೇಕು' ಎಂದರು.
'ವಿಶ್ವಾಸ, ನಂಬಿಕೆ ಹಾಗೂ ಭರವಸೆಯು ಪತ್ರಕರ್ತರಿಂದ ದೂರ ಆಗುತ್ತಿದ್ದು, ಅದನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಶ್ರಮ ವಹಿಸಬೇಕಾಗಿದೆ. ವಿಶ್ವಾಸಾರ್ಹತೆಯೇ ಮಾಧ್ಯಮದ ಗಟ್ಟಿತನ, ಅದನ್ನು ಉಳಿಸಿಕೊಳ್ಳಬೇಕಾಗಿದೆ' ಎಂದು ಹಿರಿಯ ಪತ್ರಕರ್ತ ರವೀಂದ್ರ ಶೆಟ್ಟಿ ಅಭಿಪ್ರಾಯಪಟ್ಟರು.
'ಸಾಮಾಜಿಕ ಮಾಧ್ಯಮವು ವರವೂ ಹೌದು, ಶಾಪವೂ ಹೌದು. ಅದನ್ನು ಹೇಗೆ ಬಳಸಿಕೊಳ್ಳುತ್ತೇವೆ ಎಂಬುವುದು ಮುಖ್ಯವಾಗುತ್ತದೆ. ಸದ್ಯದ ವೈರಲ್ ಯುಗದಲ್ಲಿ ಯಾವುದು ಸತ್ಯ? ಯಾವುದು ಸುಳ್ಳು ಎಂಬುದೇ ಗೊತ್ತಾಗುತ್ತಿಲ್ಲ. ಸುಳ್ಳು ಸುದ್ದಿಗಳ ಹಾವಳಿ ತಡೆಗೆ ಕಾನೂನು ರೂಪಿಸುವುದು ಅಗತ್ಯ' ಎಂದು ಹೇಳಿದರು.
'ಸಮೂಹ ಮಾಧ್ಯಮಗಳಿಂದಾಗಿ ಮುದ್ರಣ ಮಾಧ್ಯಮಗಳ ವಿಶ್ವಾಸಾರ್ಹತೆಯೂ ಕುಗ್ಗುತ್ತಿದೆ' ಎಂದು ಹಿರಿಯ ಪತ್ರಕರ್ತ ವಸಂತ ನಾಡಿಗೇರ್ ತಿಳಿಸಿದರು.
'ಸುದ್ದಿಗಳ ನಿಜಾಂಶವನ್ನು ಪರಿಶೀಲಿಸುವ ವ್ಯವಧಾನವೇ ಇಲ್ಲವಾಗಿದೆ. ಪ್ರತಿಯೊಂದು ಸುದ್ದಿಯನ್ನೂ ಫ್ಯಾಕ್ಟ್‌ಚೆಕ್ ಮಾಡಬೇಕಿದ್ದು, ಇದಕ್ಕಾಗಿ ಆಯಪ್‌ಗಳನ್ನೇ ರೂಪಿಸಲಾಗಿದೆ. ಅತಿರಂಜಿತ ಸುದ್ದಿಗಳನ್ನು ನೀಡುವ ಧಾವಂತದಲ್ಲಿ ಪ್ರಮಾದಗಳನ್ನು ಮಾಡಬಾರದು' ಎಂದು ಹೇಳಿದರು.
'ಮುದ್ರಣ ಮಾಧ್ಯಮಗಳೂ ಟಿ.ವಿ. ಮಾಧ್ಯಮಗಳನ್ನು ಅನುಸರಿಸುತ್ತಿರುವುದು ದುರಂತ. ಜಿಲ್ಲಾ ಮಟ್ಟದ ಪತ್ರಿಕೆಗಳು ಹೊಸ ತಂತ್ರಜ್ಞಾನ ಅಳವಡಿಕೆಗೆ ಸರ್ಕಾರದ ನೆರವು ಅಗತ್ಯ' ಎಂದು ಹಿರಿಯ ಪತ್ರಕರ್ತ ಅರವಿಂದ್ ಕುಲಕರ್ಣಿ ಹೇಳಿದರು.
'ಎಲ್ಲ ಮಾಧ್ಯಮಗಳಲ್ಲೂ ವೃತ್ತಿ ವಿಶ್ವಾಸಾರ್ಹತೆ ಕುಸಿಯುತ್ತಿದೆ. ಪತ್ರಿಕಾ ರಂಗವು ಉದ್ಯಮವಾಗಿ ಬದಲಾಗಿದೆ. ಸತ್ಯ ಮನೆಯಿಂದ ಹೊರಬರುವ ಮುನ್ನ ಸುಳ್ಳು ಊರು ಸುತ್ತಿಕೊಂಡು ಬರುತ್ತಿದೆ' ಎಂದು ಅಧ್ಯಕ್ಷತೆ ವಹಿಸಿದ್ದ ಹಿರಿಯ ಪತ್ರಕರ್ತ ರುದ್ರಣ್ಣ ಹರ್ತಿಕೋಟೆ ಅಭಿಪ್ರಾಯಪಟ್ಟರು.
'ಯೂಟ್ಯೂಬ್ ವಾಹಿನಿಗಳಿಂದ ಕೆಲವು ಅವಾಂತರ ಆಗುತ್ತಿರುವುದು ಸತ್ಯವಾದರೂ, ಕೆಲವು ಸುದ್ದಿಗಳಿಗೆ ಅಲ್ಲಿ ಆದ್ಯತೆ ಸಿಗುತ್ತಿರುವುದೂ ಅಷ್ಟೇ ಸತ್ಯವಾಗಿದೆ. ಮಾಧ್ಯಮ ಕ್ಷೇತ್ರವನ್ನು ಕಲುಷಿತಗೊಳಿಸುವ ಕೆಲಸವಾಗಬಾರದು' ಎಂದು ತಿಳಿಸಿದರು.
ಮಾಧ್ಯಮಗಳು ಜನರ ಬದುಕನ್ನು ನಿಯಂತ್ರಿಸುತ್ತಿದ್ದು ಸಾಮಾಜಿಕ ಮಾಧ್ಯಮಗಳ ಅನಾಹುತಗಳ ಬಗ್ಗೆ ಎಚ್ಚರ ವಹಿಸುವುದು ಅಗತ್ಯವಾಗಿದೆ. ಯೂಟ್ಯೂಬ್ ಪತ್ರಿಕೋದ್ಯಮ ಮಾಧ್ಯಮಕ್ಕೆ ಕಪ್ಪುಚುಕ್ಕೆಯಾಗಿದೆ -ಆರ್.ಜಿ.ಹಳ್ಳಿ ನಾಗರಾಜ್ ಹಿರಿಯ ಪತ್ರಕರ್ತ
ವರದಿಗಾರಿಕೆಯಿಂದ ಟೀಕೆ ಹೊಗಳಿಕೆ ಎದುರಾಗುವುದು ಸಹಜ. ನಮ್ಮ ನಡೆ- ನುಡಿಯು ವೃತ್ತಿ ವಿಶ್ವಾಸಾರ್ಹತೆಗೆ ಪೂರಕವಾಗಿರಬೇಕು. ಓದುಗರ ಹಿತ ಕಾಪಾಡುವಂತಹ ವರದಿ ಬರೆಯಬೇಕಿದೆ
-ಶೇಷಮೂರ್ತಿ ಅವದಾನಿ ಹಿರಿಯ ಪತ್ರಕರ್ತ
'ವಿಶ್ವಾಸಾರ್ಹತೆಯೇ ಮಾಧ್ಯಮದ ಮೂಲ ಬೇರು'
'ವಿಶ್ವಾಸಾರ್ಹತೆಯೇ ಮಾಧ್ಯಮದ ಮೂಲ ಬೇರು ಆಗಿದ್ದು ಸುದ್ದಿಗಳನ್ನು ಪ್ರಕಟಿಸುವ/ ಬಿತ್ತರಿಸುವ ಮುನ್ನ ಪರಾಮರ್ಶಿಸುವ ಕೆಲಸವಾಗಬೇಕು' ಎಂದು 'ಪ್ರಜಾವಾಣಿ' ದಾವಣಗೆರೆ ಬ್ಯೂರೊ ಮುಖ್ಯಸ್ಥ ಸಿದ್ದಯ್ಯ ಹಿರೇಮಠ ಅಭಿಪ್ರಾಯಪಟ್ಟರು. 'ದೇಶದಲ್ಲಿ ಸುಳ್ಳು ಸುದ್ದಿಗಳನ್ನು ಹರಿಬಿಡುವಂತಹ ಗುಂಪು ಹುಟ್ಟಿಕೊಂಡಿದೆ. ನಿರ್ದಿಷ್ಟ ವಿಷಯಕ್ಕೆ ಸಂಬಂಧಿಸಿದಂತೆ ಸುಳ್ಳು ಸುದ್ದಿಗಳನ್ನು ಹಬ್ಬಿಸಲಾಗುತ್ತಿದೆ. ಬಾಲಿವುಡ್ ನಟಿಯೊಬ್ಬರ ಸಾವಿನ ಕುರಿತಾದ ಸುಳ್ಳು ಸುದ್ದಿಯನ್ನು ದೇಶದ ಎಲ್ಲ ಮಾಧ್ಯಮಗಳಲ್ಲೂ ಪ್ರಕಟಿಸಲಾಯಿತು. ಇಂತಹ ಸುಳ್ಳು ಸುದ್ದಿಗಳಿಗೆ ಕಡಿವಾಣ ಹಾಕುವುದು ಅಗತ್ಯವಾಗಿದೆ' ಎಂದು ಪ್ರತಿಪಾದಿಸಿದರು. 'ಸುಳ್ಳು ಸುದ್ದಿಗಳಿಂದ ಮಾಧ್ಯಮಗಳ ವಿಶ್ವಾಸಾರ್ಹತೆಗೆ ಧಕ್ಕೆಯಾಗುತ್ತಿದೆ. ಯಾವುದೇ ಕಾರಣಕ್ಕೂ ಸುಳ್ಳು ಸುದ್ದಿ ಪ್ರಕಟವಾಗದಂತೆ ಜಾಗ್ರತೆ ವಹಿಸುವ ಕೆಲಸವನ್ನು ಮಾಧ್ಯಮಗಳು ಎಚ್ಚರಿಕೆಯಿಂದ ನಿರ್ವಹಿಸಬೇಕಾಗಿದೆ' ಎಂದು ಹೇಳಿದರು.