ದಾವಣಗೆರೆ: 'ಸರ್ಕಾರ ಹಾಗೂ ಮಾಧ್ಯಮವು ಒಂದಕ್ಕೊಂದು ಪೂರಕವಾಗಿದ್ದು, ಒಂದನ್ನೊಂದು ಬಿಟ್ಟು ಕಾರ್ಯನಿರ್ವಹಿಸಲು ಸಾಧ್ಯವೇ ಇಲ್ಲ' ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಅಭಿಪ್ರಾಯಪಟ್ಟರು.
ಪತ್ರಕರ್ತರ ಸಮ್ಮೇಳನದಲ್ಲಿ ಭಾನುವಾರ 'ಸಂವಾದ: ಮಾಧ್ಯಮ ಮತ್ತು ಸರ್ಕಾರ' ವಿಚಾರಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಅಭಿವೃದ್ಧಿ ಹಾಗೂ ತನಿಖಾ ಪತ್ರಿಕೋದ್ಯಮ ನಿಧಾನವಾಗಿ ಮರೆಯಾಗುತ್ತಿರುವುದು ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಹೇಳಿದರು.
'ಪತ್ರಕರ್ತರು ಸರ್ಕಾರದ ಲೋಪದೋಷಗಳ ಬಗ್ಗೆಯೇ ಹೆಚ್ಚಾಗಿ ಬರೆಯಬೇಕು. ಅದರಿಂದ ಸರ್ಕಾರ ಎಚ್ಚೆತ್ತುಕೊಂಡು ಜನಪರ ಆಡಳಿತ ನೀಡಲು ಸಹಕಾರಿಯಾಗುತ್ತದೆ' ಎಂದು ತಿಳಿಸಿದರು.
'ಇಂದಿನ ಪತ್ರಿಕೋದ್ಯಮ ಬದಲಾಗುತ್ತಿದ್ದು, ಜಾಹೀರಾತಿಗೆ ಹೆಚ್ಚಿನ ಆದ್ಯತೆ ಸಿಗುತ್ತಿದೆ. ಪತ್ರಕರ್ತರು ಕುಟುಂಬದ ಸದಸ್ಯರೊಂದಿಗೆ ಹೆಚ್ಚಿನ ಸಮಯ ಕಳೆಯಬೇಕು' ಎಂದು ಸಲಹೆ ನೀಡಿದರು.
'ಮಾಧ್ಯಮವು ಜನರ ಹಾಗೂ ಸರ್ಕಾರದ ನಡುವೆ ಸಂಪರ್ಕ ಸೇತುವೆಯಾಗಿದ್ದು, ವಸ್ತುನಿಷ್ಠ ಸುದ್ದಿಗಳನ್ನು ಕೊಟ್ಟರೆ ಅದರ ಗೌರವ ಹೆಚ್ಚಾಗುತ್ತದೆ' ಎಂದು ಹಿರಿಯ ಪತ್ರಕರ್ತೆ ಮೀನಾ ಮೈಸೂರು ಅಭಿಪ್ರಾಯಪಟ್ಟರು.
'ಪತ್ರಕರ್ತರು ಅಧಿಕಾರಿಗಳಾದರೆ ವೈಯಕ್ತಿಕ ಅಭಿಪ್ರಾಯ ಹೇಳಲು ಸಾಧ್ಯವಾಗಲ್ಲ. ಪತ್ರಕರ್ತರು ವಿರೋಧ ಪಕ್ಷದ ನಾಯಕರಂತೆ ಕೆಲಸ ನಿರ್ವಹಿಸಬೇಕು. ಸುದ್ದಿ ವಾಹಿನಿಗಳಲ್ಲಿ ಕನ್ನಡ ಪದಗಳ ಬಳಕೆ ಕಡಿಮೆಯಾಗುತ್ತಿರುವುದು ಆತಂಕಕಾರಿ' ಎಂದು ಹೇಳಿದರು.
'ಪತ್ರಕರ್ತರು ಸರ್ಕಾರದ ವಿರುದ್ಧವೇ ಬರೆಯಬೇಕು. ವರದಿಗಾರಿಕೆ ಶಕ್ತಿಯುತವಾಗಿದ್ದು, ಘನತೆಯಿಂದ ಕೂಡಿರಬೇಕು' ಎಂದು ಹಿರಿಯ ಪತ್ರಕರ್ತ ಸದಾನಂದ ಹೆಗಡೆ ಅಭಿಪ್ರಾಯಪಟ್ಟರು.
'ಮಾಧ್ಯಮವು ಜನತಂತ್ರಕ್ಕೆ ಪೂರಕವಾಗಿ ಸತ್ಯವನ್ನು ಗಟ್ಟಿಯಾಗಿ ಹೇಳಬೇಕು. ಪತ್ರಕರ್ತರು ಯಾವುದೇ ಕಾರಣಕ್ಕೂ ರಾಜಕಾರಣ ಮಾಡಬಾರದು' ಎಂದು ಸಲಹೆ ನೀಡಿದರು.
ಕಾ.ನಿ.ಪ. ಸಂಘದ ರಾಜ್ಯ ಘಟಕದ ಅಧ್ಯಕ್ಷ ಶಿವಾನಂದ ತಗಡೂರು ಅಧ್ಯಕ್ಷತೆ ವಹಿಸಿದ್ದರು.
'ಅಭಿಪ್ರಾಯ ಹೇಳುವ ಸ್ವಾತಂತ್ರ್ಯ ಸಿಗಲಿ'
'ಸರ್ಕಾರದ ತಪ್ಪುಗಳನ್ನು ಟೀಕಿಸಿ ಬರೆಯದಿದ್ದರೆ ಪತ್ರಿಕೆಗಳು ಅಸ್ತಿತ್ವ ಕಳೆದುಕೊಂಡಂತೆ' ಎಂದು ಕರ್ನಾಟಕ ಪತ್ರಕರ್ತೆಯರ ಸಂಘದ ಅಧ್ಯಕ್ಷೆ ಪದ್ಮಾ ಶಿವಮೊಗ್ಗ ಅಭಿಪ್ರಾಯಪಟ್ಟರು. 'ಪತ್ರಿಕೋದ್ಯಮ ಸತ್ಯ ಹೇಳುತ್ತಿಲ್ಲ. ಸತ್ಯ ಹೇಳುವವರು ಬಂಧನ ಹಲ್ಲೆ ಹತ್ಯೆಯಾಗುತ್ತಿದ್ದಾರೆ. ಮುಕ್ತವಾಗಿ ಅಭಿಪ್ರಾಯವನ್ನು ಹೇಳುವಂತಹ ಸ್ವಾತಂತ್ರ್ಯ ಪ್ರತಿಯೊಬ್ಬರಿಗೂ ದೊರಕಬೇಕು' ಎಂದು ಹೇಳಿದರು. 'ಸಮಾಜದ ಒಂದು ಭಾಗವಾಗಿರುವ ಪತ್ರಿಕೋದ್ಯಮ ಹಾದಿ ತಪ್ಪಿದೆ. ರಾಜಕಾರಣಿಗಳ ಕೈವಶವಾಗುತ್ತಿದೆ. ಪತ್ರಕರ್ತರು ಪದಗಳ ಬಳಕೆ ಬಗ್ಗೆ ಎಚ್ಚರ ವಹಿಸಬೇಕು ಹೆಚ್ಚೆಚ್ಚು ವಿಷಯ ತಿಳಿದಿರಬೇಕು' ಎಂದು ಸಲಹೆ ನೀಡಿದರು.