ಮುಳ್ಳೇರಿಯ: ಮುಳಿಯಾರು ಶ್ರೀ ಸುಬ್ರಹ್ಮಣ್ಯ ಸ್ವಾಮೀ ದೇವಸ್ಥಾನದಲ್ಲಿ ತ್ಯಾಗರಾಜ ಆರಾಧನೆ ಮಂಗಳವಾರ ಜರಗಿತು. ವಿದ್ಯಾನಗರ ಶ್ರೀ ಗೋಪಾಲಕೃಷ್ಣ ಸಂಗೀತ ಶಾಲೆ ಹಾಗೂ ಮುಳಿಯಾರು ಸ್ಕಂದ ನಿನಾದ ಸಂಗೀತ ಶಾಲೆಗಳ ಸಹಯೋಗದಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಸಂಗೀತ ಗುರುಗಳಾದ ವಿದುಷಿ ಉಷಾ ಈಶ್ವರ ಭಟ್ ಅವರ ಶಿಷ್ಯೆಯರು ತ್ಯಾಗರಾಜರ ಘನಪಂಚರತ್ನ ಕೀರ್ತನೆಗಳ ಆಲಾಪನೆಯನ್ನು ಪ್ರಸ್ತುತಪಡಿಸಿದರು. ಪಿಟೀಲಿನಲ್ಲಿ ವಿದ್ವಾನ್ ಪ್ರಭಾಕರ ಕುಂಜಾರು, ಮೃದಂಗದಲ್ಲಿ ವಿದ್ವಾನ್ ಶ್ರೀಧರ ಭಟ್ ಬಡಕ್ಕೇಕರೆ, ಘಟಂನಲ್ಲಿ ವಿದ್ವಾನ್ ಬಿ ಜಿ ಈಶ್ವರ ಭಟ್ ಜೊತೆಗೂಡಿದರು. ವಿದುಷಿ ಜಯಲಕ್ಷ್ಮೀ ಎಸ್. ಭಟ್, ಡಾ. ಮಾಯಾ ಮಲ್ಯ, ಡಾ. ಶಾರ್ವರಿ ಭಟ್, ಪ್ರಕಾಶ್ ಆಚಾರ್ಯ ಕುಂಟಾರು, ಉಷಾ ರವಿಶಂಕರ್, ಪ್ರೀತಾ ಸಜಿತ್, ಅರ್ಚನಾ ಶೆಣೈ, ಗೋಪಿ ಚಂದ್ರನ್, ಕುಮಾರಿ ಸಮನ್ವಿತಾ ಗಣೇಶ್, ಪುಷ್ಪಾ, ಸಂಗೀತ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಕ್ಷೇತ್ರದ ಅರ್ಚಕ ಅನಂತಪದ್ಮನಾಭ ಮಯ್ಯ ನೇತೃತ್ವ ವಹಿಸಿದ್ದರು. ಕ್ಷೇತ್ರದ ವ್ಯವಸ್ಥಾಪಕ ಸೀತಾರಾಮ ಬಳ್ಳುಳ್ಳಾಯ ಕಲಾವಿದರನ್ನು ಸತ್ಕರಿಸಿದರು. ನಿವೃತ್ತ ಅಧ್ಯಾಪಕ ಗೋವಿಂದ ಬಳ್ಳಮೂಲೆ ತ್ಯಾಗರಾಜರ ಆರಾಧನೆಯ ಮಹತ್ವದ ಬಗ್ಗೆ ವಿವರಿಸಿ ವಂದಿಸಿದರು.