ವಾರಾಣಸಿ: ಜ್ಞಾನವಾಪಿ ಮಸೀದಿಯ ನೆಲಮಾಳಿಗೆಯಲ್ಲಿ ಹಿಂದೂಗಳಿಗೆ ಪೂಜೆ ಸಲ್ಲಿಸಲು ಅನುಮತಿ ನೀಡಿದ ಜಿಲ್ಲಾ ನ್ಯಾಯಾಲಯದ ಆದೇಶದ ವಿರುದ್ಧ ಜ್ಞಾನವಾಪಿ ಮಸೀದಿಯ ನಿರ್ವಹಣಾ ಸಮಿತಿ ಅಂಜುಮನ್ ಇಂತೇಜಾಮಿಯಾ ಮಸಾಜಿದ್ ಶುಕ್ರವಾರ ಪಟ್ಟಣದಲ್ಲಿ ಬಂದ್‌ಗೆ ಕರೆ ನೀಡಿತ್ತು.

ಬಂದ್ ಹಿನ್ನೆಲೆಯಲ್ಲಿ ನಗರದ ಮುಸ್ಲಿಂ ಪ್ರಾಬಲ್ಯದ ಪ್ರದೇಶಗಳಲ್ಲಿನ ಅಂಗಡಿಗಳು ಮುಂಗಟ್ಟು ಮುಚ್ಚಿವೆ. ದಲ್ಮಂಡಿ, ನೈ ಸಡಕ್, ನಾಡೆಸರ್ ಮತ್ತು ಅರ್ದಲ್ ಬಜಾರ್‌ನ ಮಾರುಕಟ್ಟೆ ಪ್ರದೇಶಗಳಲ್ಲಿ ಬಂದ್‌ಗೆ ಸಂಪೂರ್ಣ ಬೆಂಬಲ ವ್ಯಕ್ತವಾಗಿದೆ.
ಸಮಿತಿಯು ಮಾರುಕಟ್ಟೆಗಳನ್ನು ಮುಚ್ಚುವಂತೆ ಹಾಗೂ ಶಾಂತಿಯುತವಾಗಿ ನಮಾಜ್ ಮಾಡುವಂತೆ ಜನರಿಗೆ ಮನವಿ ಮಾಡಿತ್ತು. ಅಲ್ಲದೇ ಮುಸ್ಲಿಂ ಮಹಿಳೆಯರು ಮನೆಯಲ್ಲೇ ಇರುವಂತೆಯೂ ಸಲಹೆ ನೀಡಿತ್ತು.
ಜಿಲ್ಲಾ ನ್ಯಾಯಾಲಯದ ಆದೇಶದ ಬಳಿಕ ಶುಕ್ರವಾರ ನಮಾಜ್ ಹಿನ್ನೆಲೆಯಲ್ಲಿ ವಾರಾಣಸಿ ಜಿಲ್ಲೆಯಲ್ಲಿ ಹೈ ಅಲರ್ಟ್ ಘೋಷಿಸಲಾಗಿತ್ತು.
ಪೊಲೀಸ್ ಆಯುಕ್ತ ಅಶೋಕ್ ಮುತಾ ಜೈನ್ ನಿನ್ನೆ(ಗುರುವಾರ) ತಡರಾತ್ರಿ ಪೊಲೀಸ್ ಅಧಿಕಾರಿಗಳೊಂದಿಗೆ ಭದ್ರತಾ ವ್ಯವಸ್ಥೆಗಳ ಕುರಿತು ಸಭೆ ನಡೆಸಿದ್ದರು.
ಶಾಂತಿ ಕಾಪಾಡಲು ನೆರೆಯ ಜಿಲ್ಲೆಗಳಿಂದ ಹೆಚ್ಚುವರಿ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿತ್ತು. ಕಾಶಿ ವಿಶ್ವನಾಥ ಧಾಮ ಮತ್ತು ಸಮೀಪದ ಪ್ರದೇಶಗಳಲ್ಲಿ ಹೆಚ್ಚುವರಿ ಭದ್ರತಾ ಪಡೆಗಳನ್ನು ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ ಕ್ಷಿಪ್ರ ಪೊಲೀಸ್ ಪಡೆ (ಆರ್‌ಪಿಎಫ್) ನಿಯೋಜಿಸಲಾಗಿತ್ತು.