ಕಾಸರಗೋಡು: ಐದು ವರ್ಷಗಳ ಹಿಂದೆ ನಡೆದ ಯುವತಿಯೊಬ್ಬಳ ಕೊಲೆ ಪ್ರಕರಣ ಭೇದಿಸಲು ಶ್ವಾನ ದಳದೊಂದಿಗೆ ಪೊಲೀಸ್ ಪಡೆ ಕಾಸರಗೋಡಿಗೆ ತಲುಪಿದೆ. ಮೂಲತ: ಕೊಲ್ಲಂ ಇರವಿಪುರಂ ನಿವಾಸಿ ಪ್ರಮೀಳಾ(30)ಎಂಬಾಕೆಯ ಮೃತದೇಹದ ಪತ್ತೆ ಕಾರ್ಯಾಚರಣೆಗೆ ಮರುಜೀವ ನೀಡಲಾಗಿದೆ.
ತಳಿಪರಂಬ ಆಲಕ್ಕೋಡ್ ನಿವಾಸಿಯಾಗಿರುವ ಸೆಲ್ವರಾಜ್ ಜತೆ ಕಾಸರಗೋಡು ವಿದ್ಯಾನಗರ ಸನಿಹದ ಪನ್ನಿಪ್ಪಾರೆ ಎಂಬಲ್ಲಿ ಬಾಡಿಗೆ ಕ್ವಾಟ್ರಸ್‍ನಲ್ಲಿ ವಾಸಿಸುತ್ತಿದ್ದ ಪ್ರಮಿಳಾ 2019 ಸೆ. 19ರಂದು ದಿಢೀರ್ ನಾಪತ್ತೆಯಾಗಿದ್ದಳು. ಈ ಬಗ್ಗೆ ಸೆಲ್ವರಾಜ್ ವಿದ್ಯಾನಗರ ಠಾಣೆಗೆ ನೀಡಿದ ದೂರಿನನ್ವಯ ನಾಪತ್ತೆ ಪ್ರಕರಣ ದಾಖಲಿಸಿಕೊಂಡಿದ್ದರು. ಪತಿ ಸೆಲ್ವರಾಜ್ ಚಲನವಲನದ ಬಗ್ಗೆ ಸಂಶಯಗೊಂಡ ಪೊಲೀಸರು ಈತನನ್ನು ತೀವ್ರ ವಿಚಾರಣೆಗೊಳಪಡಿಸಿದಾಗ, ತಾನು ಪ್ರಮೀಳಾಳನ್ನು ಕೊಲೆಗೈದು ಗೋಣಿಚೀಲದಲ್ಲಿ ತುಂಬಿ, ತೆಕ್ಕಿಲ್ ಹೊಳೆಗೆ ಎಸೆದಿರುವುದಾಗಿ ತಿಳಿಸಿದ್ದನು. ಹೊಳೆಯಲ್ಲಿ ಭಾರಿ ಪ್ರಮಾಣದ ನೀರು ಹರಿಯುತ್ತಿದ್ದ ಹಿನ್ನೆಲೆಯಲ್ಲಿ ಅಗ್ನಿಶಾಮಕ ದಳ, ಮುಳುಗು ತಂಡದೊಂದಿಗೆ ಅಂದು ಹುಡುಕಾಟ ನಡೆಸಿದ್ದರೂ, ಮೃತದೇಹ ಪತ್ತೆ ಸಾಧ್ಯವಾಗಿರಲಿಲ್ಲ. ಸ್ಥಳೀಯ ಪೊಲೀಸರು ಕೇಸು ದಾಖಲಿಸಿ ನಡೆಸುತ್ತಿದ್ದ ತನಿಖೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದರು. ನಂತರ ಕ್ರೈಂ ಬ್ರಾಂಚ್‍ಗೆ ಪ್ರಕರಣವನ್ನು ಹಸ್ತಾಂತರಿಸಲಾಗಿದ್ದು, ಪ್ರಸಕ್ತ ಕ್ರೈಂ ಬ್ರಾಂಚ್ ನೂತನ ಡಿವೈಎಸ್‍ಪಿ ಸುನಿಲ್ ಕುಮಾರ್ ನೇತೃತ್ವದ ಪೊಲೀಸರ ತಂಡ ಕಾರ್ಯಾಚರಣೆಗೆ ಮರುಜೀವ ನೀಡಿದೆ. ನ್ಯಾಯಾಂಗ ಬಂಧನದಲ್ಲಿದ್ದ ಸೆಲ್ವರಾಜ್ ಜಾಮೀನಿನಲ್ಲಿ ಬಿಡುಗಡೆಗೊಂಡ ನಂತರ ಕಳೆದ ಎರಡು ವರ್ಷಗಳಿಂದ ಕಣ್ಣೂರಿಗೆ ವಾಸ್ತವ್ಯ ಬದಲಾಯಿಸಿದ್ದನು. ಈ ಮಧ್ಯೆ ವಿದ್ಯಾನಗರ ಪೊಲೀಸ್ ಠಾಣೆ ವ್ಯಾಪ್ತಿಯ ಪಡುವಡ್ಕ ಎಂಬಲ್ಲಿನ ನಿರ್ಜನ ಪ್ರದೇಶದ ಹಿತ್ತಿಲೊಂದಕ್ಕೆ ಆಗಮಿಸಿದ್ದ ಸೆಲ್ವರಾಜ್ ಅಲ್ಲಿ ಹುಡುಕಾಟದಲ್ಲಿ ನಿರತನಾಗಿದ್ದ ಬಗ್ಗೆ ಮಾಹಿತಿ ಪಡೆದ ಕ್ರೈಂ ಬ್ರಾಂಚ್‍ಗೆ, ಕೊಲೆ ಪ್ರಕರಣದ ತನಿಖೆಯನ್ನು ಮತ್ತೆ ಕೈಗೆತ್ತಿಕೊಳ್ಳುವಂತೆ ಪ್ರೇರಣೆ ನೀಡಿದೆ. ಈತ ಮೃತದೇಹ ಹೂತು ಹಾಕಿದ ಜಾಗ ಪರಿಶೀಲಿಸಲು ಆಗಮಿಸಿರುವ ಬಗ್ಗೆ ಕ್ರೈಂ ಬ್ರಾಂಚ್ ಸಂಶಯ ವ್ಯಕ್ತಪಡಿಸಿ, ಶ್ವಾನ ದಳದೊಂದಿಗೆ ಶೋಧಕಾರ್ಯ ಮುಂದುವರಿಸಿದೆ. ಇದಕ್ಕಾಗಿ ಕೇರಳ ಪೊಲೀಸ್ ಇಲಾಖೆಯ ಕೊಚ್ಚಿ ಕೇಂದ್ರದಿಂದ ಮರ್ಫಿ ಹಾಗೂ ಮಾಯಾ ಎಂಬ ಎರಡು ವಿಶೇಷ ಪರಿಣತಿ ಪಡೆದ ಶ್ವಾನಗಳನ್ನು ಕಾಸರಗೋಡಿಗೆ ಕರೆಸಿಕೊಳ್ಳಲಾಗಿದ್ದು, ಶೋಧ ಕಾರ್ಯ ಮುಂದುವರಿಸಲಾಗಿದೆ.