ಬದಿಯಡ್ಕ: ಸಾಹಿತ್ಯವೆಂಬ ಕೃಷಿಯಲ್ಲಿ ಅನೇಕ ಪ್ರಾಕಾರಗಳಿವೆ. ನಮ್ಮ ಆಯ್ಕೆಗೆ ಹೊಂದಿಕೊಂಡು ಕಥೆ, ಕವನ, ಸಾಹಿತ್ಯಗಳು ರೂಪುಗೊಳ್ಳುತ್ತವೆ. ಬಾಲ್ಯದಲ್ಲಿಯೇ ಸದಾ ಪುಸ್ತಕಗಳನ್ನು ಓದುವ ಹವ್ಯಾಸವನ್ನು ರೂಢಿಸಿಕೊಂಡಾಗ ನಮ್ಮೊಳಗಿರುವ ಸಾಹಿತ್ಯದ ಬೀಜ ಮೊಳಕೆಯೊಡೆಯುತ್ತದೆ. ಪುಸ್ತಕವು ಮಸ್ತಕದ ವಿಕಾಸಕ್ಕೆ ಪೂರಕವಾಗಿದೆ ಎಂದು ಧನ್ಯಶ್ರೀ ಸರಳಿ ಅಭಿಪ್ರಾಯಪಟ್ಟರು.
ಕುಂಟಿಕಾನ ಅನುದಾನಿತ ಹಿರಿಯ ಬುನಾದಿ ಶಾಲೆಯಲ್ಲಿ ಮಂಗಳವಾರ ಜರಗಿದ `ಬಡ್ಡಿಂಗ್ ರೈಟರ್ಸ್' ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿಯೂ ಒಂದೊಂದು ಪ್ರತಿಭೆ ಇರುತ್ತದೆ. ಅದನ್ನು ನಾವು ಮನಗಂಡು ಅದಕ್ಕೆ ಪೂರಕವಾದ ಚಟುವಟಿಕೆಗಳನ್ನು ಮುಂದುವರಿಸಿಕೊಂಡು ಹೋದಾಗ ಆ ವಿದ್ಯಾರ್ಥಿಯ ಜ್ಞಾನವು ವಿಕಾಸವನ್ನು ಹೊಂದುತ್ತದೆ ಎಂದರು.
ಶಾಲಾ ಮುಖ್ಯೋಪಾಧ್ಯಾಯ ವೆಂಕಟ್ರಾಜ ವಾಶೆಮನೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಕ್ಕಳಿಗೆ ಓದಿ ಬರೆಯಲು ಹೆತ್ತವರು ಸದಾ ಪ್ರೋತ್ಸಾಹವನ್ನು ನೀಡಬೇಕು. ಅವರನ್ನು ಸರಿಯಾದ ದಾರಿಯಲ್ಲಿ ಮುನ್ನಡೆಸುವ ಜವಾಬ್ದಾರಿ ಹೆತ್ತವರಿಗಿದೆ. ಅದರೊಂದಿಗೆ ಸರಿಯಾದ ವಿದ್ಯಾಭ್ಯಾಸ ಲಭಿಸಬೇಕು ಎಂದರು. ಇದೇ ಸಂದರ್ಭದಲ್ಲಿ ಬಡ್ಡಿಂಗ್ ರೈಟರ್ಸ್ ಹಸ್ತಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು. ಅಧ್ಯಾಪಿಕೆ ಅಖಿಲಾ ಲಕ್ಷ್ಮೀ, ವಿದ್ಯಾರ್ಥಿಗಳಾದ ಮಾಳವಿಕಾ ರಮೇಶ್, ಹಿತೈಶಿ, ಅನಾಮಿಕಾ ಏಂಟನಿ, ಶರಣ್ಯ ಕೆ. ಮೊದಲಾದವರು ಸ್ವರಚಿತ ಕವನವಾಚಿಸಿದರು. ಹಿರಿಯ ಅಧ್ಯಾಪಕ ಉಣ್ಣಿಕೃಷ್ಣನ್ ಟಿ.ಒ., ನೌಕರ ಸಂಘದ ಕಾರ್ಯದರ್ಶಿ ಪ್ರಶಾಂತ್ ಕುಮಾರ್ ಬಿ ಮಾತನಾಡಿದರು. ವಿದ್ಯಾರಂಗದ ಸಂಚಾಲಕ ಪ್ರದೀಪ್ ಕುಮಾರ್ ಬಿ ಸ್ವಾಗತಿಸಿ, ಶಾಂತಿಪ್ರಿಯಾ ವಂದಿಸಿದರು. ಶಾಲಾ ವಿದ್ಯಾರ್ಥಿಗಳು ಆಸಕ್ತಿಯಿಂದ ಭಾಗವಹಿಸಿದ್ದರು.