ಇಸ್ರೇಲ್ :ಇಸ್ರೇಲ್ ವಿರುದ್ಧ ನರಮೇಧದ ಆರೋಪ: ಜನವರಿ 2024ರಲ್ಲಿ ದಕ್ಷಿಣ ಆಫ್ರಿಕಾ ಇಸ್ರೇಲ್ ವಿರುದ್ಧ ಅಂತರರಾಷ್ಟ್ರೀಯ ನ್ಯಾಯಾಲಯದಲ್ಲಿ ನರಮೇಧದ ಪ್ರಕರಣ ದಾಖಲಿಸಿದೆ. 'ಅಂತರರಾಷ್ಟ್ರೀಯ ನರಮೇಧದ ವಿರೋಧಿ ಒಪ್ಪಂದ'ವನ್ನು ಉಲ್ಲಂಘಿಸಿದೆ ಎಂದು ಆರೋಪಿಸಿದೆ.
ನರಮೇಧವೆಂದರೆ ಒಂದು ರಾಷ್ಟ್ರ, ಜನಾಂಗ ಅಥವಾ ಧಾರ್ಮಿಕ ಗುಂಪನ್ನು ನಾಶ ಮಾಡುವ ಉದ್ದೇಶದಿಂದ ಹತ್ಯೆ ಮಾಡುವುದು.
ದಕ್ಷಿಣ ಆಫ್ರಿಕಾದ ಆರೋಪಗಳು: ಅಕ್ಟೋಬರ್ 2023ರಿಂದ ಇಸ್ರೇಲ್ ಪ್ಯಾಲೆಸ್ಟೀನ್ ಮೇಲೆ ಗಾಜಾ ಪಟ್ಟಿಯಲ್ಲಿ ಶಸ್ತ್ರಸಜ್ಜಿತ ದಾಳಿಯನ್ನು ಪ್ರಾರಂಭಿಸಿದ್ದು ನರಮೇಧದ ಉದ್ದೇಶವನ್ನು ಹೊಂದಿದೆ ಎಂದು ಆರೋಪಿಸಿದೆ. ನಾಗರಿಕ ಸಮುದಾಯದ ಹತ್ಯೆ ಮತ್ತು ಪ್ಯಾಲೆಸ್ಟೀನ್ ನಿವಾಸಿಗಳನ್ನು ಸ್ಥಳಾಂತರ ಮಾಡುವ ಉದ್ದೇಶ ಇಸ್ರೇಲ್‌ಗೆ ಇತ್ತು. ಕೆಲ ಸಂದರ್ಭಗಳಲ್ಲಿ ಸಾರ್ವಜನಿಕರು ಕೂಡ ಪ್ಯಾಲೆಸ್ಟೀನ್ ನಿವಾಸಿಗಳ ಮೇಲೆ ಹಲ್ಲೆ ಮಾಡುತ್ತಿದ್ದರೂ ಯಾವುದೇ ರೀತಿಯ ಕಾನೂನು ಕ್ರಮವನ್ನು ಜರುಗಿಸಲು ಇಸ್ರೇಲ್ ವಿಫಲವಾಗಿದೆ ಎಂದು ದಕ್ಷಿಣ ಆಫ್ರಿಕಾ ಆರೋಪಿಸಿದೆ
ಹಿಂದಿನ ಪ್ರಕರಣಗಳು: ಇದೇ ಸ್ವರೂಪದ ಪ್ರಕರಣಗಳನ್ನು ಉಕ್ರೇನ್, ರಷ್ಯಾದ ವಿರುದ್ಧ ಮತ್ತು ಗಾಂಭಿಯ ಮಯನ್ಮಾರ್ ವಿರುದ್ಧ ಅಂತರರಾಷ್ಟ್ರೀಯ ನ್ಯಾಯಾಲಯದಲ್ಲಿ ಪ್ರಕರಣವನ್ನು ದಾಖಲಿಸಿತ್ತು.
ಈಕ್ವೆಡಾರ್‌ನಿಂದ ತುರ್ತು ಪರಿಸ್ಥಿತಿಯ ಘೋಷಣೆ
ಈಕ್ವೆಡಾರ್ ನ ಕುಖ್ಯಾತ ಅಪರಾಧಿ ಜೈಲಿನಿಂದ ತಪ್ಪಿಸಿಕೊಂಡ ಕಾರಣದಿಂದ ಈಕ್ವೆಡಾರ್ ಅಧ್ಯಕ್ಷರಾದ ಡೇನಿಯಲ್ ನಬಾವ 60 ದಿನಗಳ ತುರ್ತುಪರಿಸ್ಥಿತಿಯನ್ನು ಹೇರಿದ್ದಾರೆ.
ತಪ್ಪಿಸಿಕೊಂಡ ವ್ಯಕ್ತಿಯನ್ನು ಬಂಧಿಸಲು ಸಾಧ್ಯವಾಗದ ಕಾರಣ, ಇದರಿಂದ ರಾಷ್ಟ್ರದಾದ್ಯಂತ ವಿವಿಧ ರೀತಿಯ ಸಮಸ್ಯೆಗಳು ಉದ್ಭವವಾಗಬಹುದಾದ ಸಾಧ್ಯತೆ ಹೆಚ್ಚಾಗಿರುವುದರಿಂದ ಈ ಕ್ರಮ ಕೈಗೊಂಡಿದ್ದಾರೆ.
ಈಕ್ವೆಡಾರ್‌ನ ಕುಖ್ಯಾತ ಗ್ಯಾಂಗ್ಸ್‌ಸ್ಟರ್ ಜೋಸ್ ಅಡಾಲ್ಫೋ ಮಸ್ಯಾಸ್ (ಫಿಟೋ ಎಂಬ ಹೆಸರಿನಿಂದ ಕುಖ್ಯಾತಿಗೊಂಡಿದ್ದ) 34 ವರ್ಷಗಳ ಕಾಲ ಜೈಲು ಶಿಕ್ಷೆಯನ್ನು ಅನುಭವಿಸುತ್ತಿದ್ದ. ಮಾದಕ ವಸ್ತುಗಳ ಸಾಗಣೆ, ಹತ್ಯೆ ಪ್ರಕರಣಗಳು, ಕೊಲೆ ಸುಲಿಗೆಗಳಲ್ಲಿ ಆರೋಪಗಳು ಸಾಬೀತಾಗಿದ್ದವು.
ಸುಸ್ಥಿರ ಇಂಧನ ಪಾಲುದಾರಿಕೆ
ಡೆನ್ಮಾರ್ಕ್ ಸರ್ಕಾರ ಸುಸ್ಥಿರ ಇಂಧನ ವಲಯದಲ್ಲಿ ಭಾರತದೊಂದಿಗೆ ಪಾಲುದಾರಿಕೆಯನ್ನು ಹೊಂದಲು 'ಹಸಿರು ಇಂಧನ ಭಾರತ ಒಕ್ಕೂಟ' ಪ್ರಾರಂಭಿಸುವ ಘೋಷಣೆ ಮಾಡಿದೆ. ಎರಡು ರಾಷ್ಟ್ರಗಳ ನಡುವೆ ಹಸಿರು ಇಂಧನದ ಬಳಕೆಯನ್ನು ಹೆಚ್ಚಿಸುವ ಉದ್ದೇಶದಿಂದ ಮತ್ತು ಶುದ್ಧ ಜಲಜನಕ ಇಂಧನವನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ ಈ ಕ್ರಮಕ್ಕೆ ಮುಂದಾಗಿವೆ.
2020ರಲ್ಲಿ ಎರಡು ರಾಷ್ಟ್ರಗಳ ನಡುವೆ ಹಸಿರು ಇಂಧನ ವಲಯ ಕಾರ್ಯತಂತ್ರದ ಸಹಭಾಗಿತ್ವ ಒಪ್ಪಂದವನ್ನು ಸಹಿ ಹಾಕಲಾಗಿತ್ತು.
ಭಾರತ 2070ರ ಒಳಗಾಗಿ ಶೂನ್ಯ ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆ ಗುರಿಯನ್ನು ಹೊಂದಿದ್ದು ಈ ನಿಟ್ಟಿನಲ್ಲಿ ಭಾರತಕ್ಕೆ ಬೆಂಬಲ ನೀಡುವ ಉದ್ದೇಶದಿಂದ ಡೆನ್ಮಾರ್ಕ್ ಮುಂದಾಗಿದೆ.
ಭಾರತ ಮತ್ತು ಮಾರಿಷಸ್ ಜಂಟಿ ಒಪ್ಪಂದಕ್ಕೆ ಸಹಿ
2024ರ ಪ್ರಾಥಮಿಕ ಹಂತದಲ್ಲಿ ಇಸ್ರೊ ಸಂಸ್ಥೆ ಭಾರತ ಮತ್ತು ಮಾರಿಷಸ್ ಜಂಟಿಯಾಗಿ ಅಭಿವೃದ್ಧಿಪಡಿಸುವ ಸಣ್ಣ ಉಪಗ್ರಹವನ್ನು ಉಡಾಯಿಸಲು ನಿರ್ಧಾರವನ್ನು ಕೈಗೊಂಡಿದ್ದು ಈ ನಿಟ್ಟಿನಲ್ಲಿ ಎರಡು ರಾಷ್ಟ್ರಗಳ ನಡುವೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.
ಒಪ್ಪಂದ ಸಹಿ ಹಾಕಿರುವ ಸಂಸ್ಥೆಗಳು-ಇಸ್ರೊ ಮತ್ತು ಮಾರಿಷಸ್ ರಿಸರ್ಚ್ ಅಂಡ್ ಇನ್ನೋವೇಶನ್ ಕೌನ್ಸಿಲ್.
1986ರಲ್ಲಿ ಭಾರತ ಸರ್ಕಾರ ತನ್ನ ಬಾಹ್ಯಾಕಾಶ ಚಟುವಟಿಕೆಗಳಿಗೆ ಸಹಾಯವಾಗಲು ಮಾರಿಷಸ್ ಗ್ರೌಂಡ್ ಟ್ರಾಕಿಂಗ್ ಸ್ಟೇಷನ್ ಸ್ಥಾಪಿಸಿದ್ದು ಇಂದಿಗೂ ಕೂಡ ಎರಡು ರಾಷ್ಟ್ರಗಳ ನಡುವಿನ ಈ ಸಹಕಾರ ಮುಂದುವರೆಯುತ್ತಿದೆ.